ಉಡುಪಿ, ಮಾ. 16: ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯ ವಾರ್ಷಿಕ ದಿನಾಚರಣೆ ಮತ್ತು ಮಹಿಳಾ ದಿನದ ಆಚರಣೆ ಉಡುಪಿಯ ಟೌನ್ ಹಾಲ್‌ನಲ್ಲಿ ನಡೆಯಿತು. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಸಮಾಜದ ಶ್ರೇಯೋಭಿವೃದ್ಧಿಗೆ ಸಕ್ರಿಯ ಕೊಡುಗೆ ನೀಡಿದ ವಿದ್ಯಾ ಆನಂದ್ ಮತ್ತು ಯಶಸ್ವಿ ಮಹಿಳಾ ಉದ್ಯಮಿ ಪ್ರಸನ್ನ ಪದ್ಮರಾಜ್ ಅವರನ್ನು ಸನ್ಮಾನಿಸಲಾಯಿತು. ಸಮಾಜಕ್ಕೆ ಇವರಿಬ್ಬರೂ ಮಹಿಳೆಯರ ಕೊಡುಗೆಗಳನ್ನು ಗುರುತಿಸಿ, ಅವರ ನಾಯಕತ್ವ ಮತ್ತು ಸಾಧನೆಯ ಮನೋಭಾವವನ್ನು ಶ್ಲಾಘಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕೆಎಂಸಿ ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ ಮತ್ತು ಎಂಎಂಎಂಸಿ ಮಣಿಪಾಲದ ಡೀನ್ ಡಾ. ಉಲ್ಲಾಸ್ ಕಾಮತ್ ಉಪಸ್ಥಿತರಿದ್ದರು. ಮಣಿಪಾಲ ಮಾಹೆಯ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಡುಪಿಯ ಜನತೆಗೆ ಉತ್ತಮ ಗುಣಮಟ್ಟದ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವಲ್ಲಿ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ಮಹತ್ವದ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಉಡುಪಿಯ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಸ್ವಾಗತಿಸಿ, ಕಳೆದ ವರ್ಷದಲ್ಲಿ ಆಸ್ಪತ್ರೆ ಕೈಗೊಂಡಿರುವ ಹೊಸ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಂಚಿಕೊಂಡರು. ಮಹಿಳಾ ಸಿಬ್ಬಂದಿಯ ಬದ್ಧತೆ ಮತ್ತು ಸಹಾನುಭೂತಿಯ ಆರೈಕೆಯನ್ನು ಅವರು ಶ್ಲಾಘಿಸಿ, ಇದು ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ವಿವರಿಸಿದರು. ಹಿಂದಿನ ಮೂರು ವಾರಗಳಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಸ್ಪತ್ರೆಯಾದ್ಯಂತದ ಸಿಬ್ಬಂದಿಗಳಿಗಾಗಿ ನಡೆಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ಸಿಬ್ಬಂದಿಗಳು ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ, ರಂಗೋಲಿಯಿಂದ ಚದುರಂಗದವರೆಗೆ ವಿವಿಧ ಚಟುವಟಿಕೆಗಳಲ್ಲಿ ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಿದರು. ಆಸ್ಪತ್ರೆಯ ವಾರ್ಷಿಕ ದಿನದಂದು ಗಣ್ಯರಿಂದ ಬಹುಮಾನಗಳನ್ನು ವಿತರಿಸಲಾಯಿತು.
ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ಸಿಬ್ಬಂದಿಗಳು ಪ್ರಸ್ತುತಪಡಿಸಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.