ಕುಂದಾಪುರ, ಮಾ. 14: ಬಿ. ಎಂ. ಸುಕುಮಾರ ಶೆಟ್ಟಿಯವರ ಅಧ್ಯಕ್ಷತೆಯ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಂ. ಎಂ. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್.ಆಚಾರ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಫಿನಿಶಿಂಗ್ ಟಚ್: ಟಾಪರ್ಸ್ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಉನ್ನತ ಸ್ಥಾನ ಗಳಿಸಿದ ಶಾಲೆಯ ಹಳೆ ವಿದ್ಯಾರ್ಥಿಗಳಾದ ಅಭಿಲಾಷ್ ಎಸ್. ಹತ್ವಾರ್, ಅಶ್ವಿನಿ ಕೆ. ಮತ್ತು ಅನಿರುದ್ಧ ಎಸ್. ಹತ್ವಾರ್ ಮಾತನಾಡಿ ತಮ್ಮ ಯಶಸ್ವಿಗೆ ಕಾರಣವಾದ ಅಂಶಗಳಾದ ಕಲಿಕಾ ವೇಳಾಪಟ್ಟಿಯೊಂದಿಗಿನ ತಯಾರಿ, ಕಲಿತದ್ದನ್ನು ನೆನಪಿಟ್ಟುಕೊಳ್ಳುವ ಬಗ್ಗೆ, ತಾವು ಅನುಭವಿಸಿದಂತಹ ತೊಂದರೆಗಳು, ಅದನ್ನು ಹೋಗಲಾಡಿಸಿಕೊಂಡ ರೀತಿ, ಪೋಷಕರ ಹಾಗೂ ಶಿಕ್ಷಕರ ಸಹಕಾರ ಮುಂತಾದ ವಿಚಾರಗಳ ಬಗ್ಗೆ ತಮ್ಮ ಅನುಭವಗಳನ್ನು ಪ್ರಸ್ತುತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿದ್ಯಾರ್ಥಿಗಳು ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವುದರ ಮೂಲಕ ಗೊಂದಲಗಳನ್ನು ಬಗೆಹರಿಸಿಕೊಂಡರು. ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್ ಅಧ್ಯಕ್ಷತೆಯನ್ನು ವಹಿಸಿದ್ದು ಉಪಪ್ರಾಂಶುಪಾಲೆ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ. ಎನ್. ಸಹಾಯಕ ಮುಖ್ಯ ಶಿಕ್ಷಕ ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕ ಕೆ. ಪರಮೇಶ್ವರ ಉಡುಪ ಕಾರ್ಯಕ್ರಮವನ್ನು ನಿರ್ವಹಿಸಿದರು.