ಉಡುಪಿ, ಮಾ. 10: ಉಡುಪಿಯ ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗಿನ ರಸ್ತೆಯನ್ನು 70 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಸಚಿವರು, ಈ ರಸ್ತೆ ಆಭಿವೃದ್ಧಿಯು ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದು, ಇಲ್ಲಿ ಮೀನುಗಾರಿಕಾ ಬಂದರು ಮತ್ತು ಪ್ರವಾಸಿ ಕ್ಷೇತ್ರವಾದ ಮಲ್ಪೆ ಬೀಚ್ ಇರುವ ಕಾರಣ ಈ ರಸ್ತೆಯಲ್ಲಿ ವಾಹನ ದಟ್ಟಣೆ ಅತ್ಯಧಿಕವಾಗಿದ್ದು, ಕಿರಿದಾದ ರಸ್ತೆಯಿಂದ ಹಲವು ಅಪಘಾತಗಳಿಗೆ ಸಹ ಕಾರಣವಾಗಿದ್ದು, ಪ್ರಸ್ತುತ ಈ ರಸ್ತೆ ವಿಸ್ತರಣೆಯ ಮೂಲಕ ಬಂದರುನಲ್ಲಿ ಹೆಚ್ಚಿನ ಅರ್ಥಿಕ ಚಟುವಟಿಕೆಗಳು ನಡೆಯಲು ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳು ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ ಎಂದರು.
ಪ್ರಸ್ತುತ ಈ ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಿ ಶೀಘ್ರದಲ್ಲಿ ರಸ್ತೆ ಕಾಮಗಾರಿ ಮುಕ್ತಾಯಗೊಳ್ಳಲು ಸಹಕಾರ ನೀಡುವಂತೆ ತಿಳಿಸಿದರು. ಈ ಹಿಂದೆ ಜಿಲ್ಲೆಯ ರಾಷ್ಟಿçÃಯ ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು, ಇದರಿಂದಾಗಿ ಸಂತೆಕಟ್ಟೆ, ಅಂಬಲಪಾಡಿ ಮತ್ತು ಕಟಪಾಡಿಯಲ್ಲಿ ಸಮಸ್ಯೆಗಳಾಗಿದ್ದು, ಸರ್ವಿಸ್ ರಸ್ತೆ ಸಹ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿಲ್ಲ. ಆದರೆ ಪ್ರಸ್ತುತ ಕೇಂದ್ರ ಸರ್ಕಾರದ ನೆರವಿನಿಂದ ಸಂತೆಕಟ್ಟೆಯಲ್ಲಿ 27 ಕೋಟಿ ರೂ. ವೆಚ್ಚದಲ್ಲಿ ಓವರ್‌ಪಾಸ್ ಕಾಮಗಾರಿ ನಡೆಯುತ್ತಿದ್ದು, ಅಂಬಲಪಾಡಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಅಂಡರ್‌ಪಾಸ್ ಕಾಮಗಾರಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದರು.
ಶಾಸಕ ಕೆ. ರಘುಪತಿ ಭಟ್ ಸ್ವಾಗತಿಸಿ ಮಾತನಾಡಿ, ಡಬಲ್ ಇಂಜಿನ್ ಸರ್ಕಾರದಿಂದ ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಹೆಬ್ರಿಯಿಂದ ಮಲ್ಪೆವರೆಗೆ ಒಟ್ಟು 350 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗಿನ ಕಾಮಗಾರಿಗೆ ಭೂಮಿ ನೀಡುವ ಮಾಲೀಕರಿಗೆ ಸೂಕ್ತ ಪರಿಹಾರ ದೊರೆಯಲಿದೆ ಎಂದರು. ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಕೊಡವೂರು, ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಮಟ್ಟಾರು ರತ್ನಾಕರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ನಗರಸಭಾ ಸದಸ್ಯ ಸುಂದರ ಕಲ್ಮಾಡಿ ವಂದಿಸಿದರು.