ಉಡುಪಿ, ಮಾ. 9: ಸಣ್ಣ ನಿವೇಶನದಲ್ಲಿ ಸುಮಾರು 60 ಕ್ಕೂ ಅಧಿಕ ಶುದ್ಧ ದೇಶಿ ಹಸುಗಳನ್ನು ಲಾಭದ ಉದ್ದೇಶಕ್ಕಿಂತ ಗೋರಕ್ಷಣೆಯ ಮಹತ್ಕಾರ್ಯದ ದೃಷ್ಟಿಯಿಂದ ನಡೆಸುತ್ತ ಬಂದಿರುವ, ಆ ಮೂಲಕ ಗೋಪೋಷಣೆಯ ಕಾರ್ಯದಿಂದ ಹಿಂದೇಟು ಹಾಕುತ್ತಿರುವ ಸಮಾಜದ ಕಣ್ತೆರೆಸುವ ಕಾರ್ಯ ಮಾಡುತ್ತಿರುವ ಉಡುಪಿ ನಗರದ ದೊಡ್ಡಣಗುಡ್ಡೆ ಸಮೀಪದ ಅಂಬೇಡ್ಕರ್ ಕಾಲೊನಿಯ ನಿವಾಸಿ ಸಾಧಕ ಮಹಿಳೆ ಕಮಲಮ್ಮನವರನ್ನು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಅವರ ಸ್ವಗೃಹದಲ್ಲಿ ರೋಟರಿ ಮತ್ತು ಚೈಲ್ಡ್ ಲೈನ್ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 15 ಚೀಲಗಳಷ್ಟು ಗೋಗ್ರಾಸವನ್ನು ನೀಡಲಾಯಿತು.
ರೋಟರಿ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ, ಮಹಿಳಾ ಸಬಲೀಕರಣ ವಲಯ ಸಂಯೋಜಕಿ ಮತ್ತು ಕ್ಲಬ್ ನ ಸಮಾಜಸೇವಾ ನಿರ್ದೇಶಕಿ ದೀಪಾ ಭಂಡಾರಿ, ಅದ್ಯಕ್ಷ ಸುಬ್ರಹ್ಮಣ್ಯ ಕಾರಂತ, ಕಾರ್ಯದರ್ಶಿ ಗುರುರಾಜ ಭಟ್, ವನಿತಾ ಉಪಾಧ್ಯಾಯ, ಸಮಾಜಸೇವಕ ವಾಸುದೇವ ಭಟ್ ಪೆರಂಪಳ್ಳಿ ಮುಂತಾದವರಿದ್ದರು.