ಮಣಿಪಾಲ, ಮಾ.4: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ರಕ್ತ ಕೇಂದ್ರವು 2023 ರ ಮಾರ್ಚ್ 2 ಮತ್ತು 3 ರಂದು ‘ರೋಗಿ ರಕ್ತ ನಿರ್ವಹಣೆ ಮತ್ತು ಟ್ರಾನ್ಸ್ ಪ್ಲಾಂಟ್ ಇಮ್ಮುನೋಲಜಿ ಕೇಂದ್ರೀಕರಿಸಿ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ಬ್ಲಡ್ ಟ್ರಾನ್ಸ್‌ಫ್ಯೂಷನ್, ಆಮ್ಸ್ಟರ್‌ಡ್ಯಾಮ್, ನೆದರ್ಲ್ಯಾಂಡ್, ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರವು ಇತ್ತೀಚೆಗೆ ಪಡೆದ ಅಭಿವೃದ್ಧಿಶೀಲ ರಾಷ್ಟ್ರಗಳಿಗಿರುವ ಪ್ರಶಸ್ತಿಯ ಭಾಗವಾಗಿ ವಿಚಾರ ಸಂಕಿರಣವನ್ನು ಬೆಂಬಲಿಸಿತು.
ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನ ವಿಭಾಗದ ಉಪಕುಲಪತಿ ಡಾ. ಶರತ್ ರಾವ್ ಅವರು ಇಮ್ಯುನೊಹೆಮಟಾಲಜಿ ವಿಭಾಗದ ಪ್ರಯತ್ನವನ್ನು ಶ್ಲಾಘಿಸಿದರು ಮತ್ತು ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಪದ್ಮರಾಜ್ ಹೆಗ್ಡೆ ಅವರು, ರೋಗಿಗಳ ರಕ್ತ ನಿರ್ವಹಣೆಯ ಅಭ್ಯಾಸಗಳೊಂದಿಗೆ ರಕ್ತಪೂರಣ ಔಷಧವು ವೈಯಕ್ತಿಕ ಔಷಧದತ್ತ ಸಾಗುತ್ತಿದೆ ಎಂದರು.
ಐ.ಎಸ್.ಬಿ.ಟಿ ನೀಡಿದ ಬೆಂಬಲವನ್ನು ಶ್ಲಾಘಿಸಿದರು ಮತ್ತು ಐ.ಎಸ್.ಬಿ.ಟಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಜೆನ್ನಿ ವೈಟ್, ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯದ ಪ್ರೊಫೆಸರ್ ಎರಿಕಾ ವುಡ್, ಐ.ಎಸ್.ಬಿ.ಟಿ ಸೆಲ್ಯುಲಾರ್ ಥೆರಪಿ ವರ್ಕಿಂಗ್ ಪಾರ್ಟಿ ಅನ್ನು ಪ್ರತಿನಿಧಿಸುವ ಡಾ. ಬೆಲೆನ್ ಅವರಿಗೆ ಅಭಿನಂದಿಸಿದರು. ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ರಾಷ್ಟ್ರೀಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ನವದೆಹಲಿಯ ಏಮ್ಸ್ ಡಾ. ಪೂನಂ ಮಲ್ಹೋತ್ರಾ, ಪಿಜಿಐ ಚಂಡೀಗಢದ ಡಾ. ಆರ್.ಆರ್.ಶರ್ಮಾ, ವೆರ್ಫೆನ್ ಇಂಡಿಯಾದ ಡಾ. ಅಜಯ್ ಗಾಂಧಿ, ಜುಬಿಲಿ ಮಿಷನ್ ಕೇರಳದ ಡಾ. ಎಂ.ಎ.ರಫಿ, ಸಿಎಂಸಿ ವೆಲ್ಲೂರಿನ ಡಾ. ಡಾಲಿ ಡೇನಿಯಲ್, ಟಿಟಿಕೆ ರಕ್ತ ಕೇಂದ್ರದ ಡಾ.ಅಂಕಿತ್ ಮಾಥುರ್, ಮುಂಬೈನ ಧೀರೂಬಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಡಾ. ರಾಜೇಶ್ ಸಾವಂತ್ ಅವರನ್ನು ಸನ್ಮಾನಿಸಿದರು. ಇವರೆಲ್ಲರೂ ವಿಚಾರ ಸಂಕಿರಣದ ಮುಖ್ಯ ವಿಷಯಗಳ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದ ಕುರಿತು ಅವಲೋಕನವನ್ನು ನೀಡಿದ ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರದ ಪ್ರಾಧ್ಯಾಪಕರು/ಮತ್ತು ಮುಖ್ಯಸ್ಥರಾದ ಹಾಗೂ ಸಂಘಟನಾ ಅಧ್ಯಕ್ಷರಾದ ಡಾ. ಶಮೀ ಶಾಸ್ತ್ರಿ ಅವರು ಉಪನ್ಯಾಸಗಳ ಜೊತೆಗೆ, ವಿಚಾರ ಸಂಕಿರಣವು ವಿಸ್ಕೋಲಾಸ್ಟಿಕ್ ಪರೀಕ್ಷೆ, ಮೌಖಿಕ, ಪೋಸ್ಟರ್ ಪ್ರಸ್ತುತಿ ಮತ್ತು ರಸಪ್ರಶ್ನೆ, ಪ್ರಾಯೋಗಿಕ ಕಾರ್ಯಾಗಾರವನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಯಿತು. ತಜ್ಞ ವೈದ್ಯರ ಜತೆ ಆಯೋಜಿಸಿದ ಚರ್ಚಾ ಅಧಿವೇಶನವು ಬಹಳ ಉಪಯುಕ್ತವಾಗಿತ್ತು ಎಂದರು. ದೇಶಾದ್ಯಂತ ಸುಮಾರು 150 ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಹಾಗೂ ಸಹ ಪ್ರಾಧ್ಯಾಪಕ ಡಾ. ಗಣೇಶ್ ಮೋಹನ್ ವಂದಿಸಿದರು.