ಉಡುಪಿ, ಮಾ. 4: ಜಿಲ್ಲೆಯಲ್ಲಿ ಹೆರಿಗೆಯ ಸಂದರ್ಭದಲ್ಲಿ ಮತ್ತು ನಂತರದಲ್ಲಿ ಸಂಭವಿಸುವ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತೆಗಳ ವೈದ್ಯರುಗಳು ಸಂಘಟಿತ ಪ್ರಯತ್ನ ನಡೆಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದರು. ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ,ಆರೋಗ್ಯ ಇಲಾಖೆಯ ವಿವಿದ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗರ್ಭಿಣಿ ಮಹಿಳೆಯರಿಗೆ ನೀಡುವ ತಾಯಿ ಕಾರ್ಡ್ ನಲ್ಲಿ ಪ್ರತಿ ತಿಂಗಳ ಪರೀಕ್ಷೆ ಮಾಡಿಕೊಳ್ಳಬೇಕಾದ ದಿನಾಂಕ, ತೆಗೆದುಕೊಳ್ಳಬೇಕಾದ ಔಷಧಿಗಳು ಮತ್ತು ಲಸಿಕೆಗಳ ಬಗ್ಗೆ ವಿವರವಾಗಿ ನಮೂದಿಸಿ, ಮಹಿಳೆಯರಿಗೆ ಮಾಹಿತಿ ನೀಡಬೇಕು. ತಿಂಗಳ ತಪಾಸಣೆಗೆ ಬಂದಂತಹ ಸಂದರ್ಭದಲ್ಲಿ ಆರೋಗ್ಯ ತಪಾಸಣೆ ವೇಳೆಯಲ್ಲಿ ಹೃದಯ ಸಂಬಂಧಿ ಮಧುಮೇಹ ಸೇರಿದಂತೆ ಇತರ ಖಾಯಿಲೆಗಳ ಬಗ್ಗೆಯೂ ಪರಿಕ್ಷೀಸಿ ಚಿಕಿತ್ಸೆ ನೀಡಬೆಕು ಎಂದರು. ಪ್ರತೀ ತಿಂಗಳು ನಡೆಯುವ ಆರೋಗ್ಯ ಇಲಾಖೆಯ ಸಭೆಯಲ್ಲಿ, ತಾಯಿ ಕಾರ್ಡ್ ಪರಿಶೀಲನೆ ಕುರಿತಂತೆ ಪ್ರತ್ಯೇಕ ವಿಷಯವನ್ನು ಚರ್ಚಿಸುವಂತೆ ಹಾಗೂ ತಾಯಿ ಕಾರ್ಡ್ಗಳನ್ನು ಸಂಬಂಧಪಟ್ಟ ವೈದ್ಯರು ಪರಿಶೀಲಿಸಿರುವ ಬಗ್ಗೆ ನಿಗಾವಹಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಏಪ್ರಿಲ್ ನಿಂದ ಜನವರಿ ವರೆಗೆ ಒಟ್ಟು 11,136 ಹೆರಿಗೆಗಳು ನಡೆದಿದ್ದು, ಇದರಲ್ಲಿ 4 ತಾಯಿ ಮರಣ ಮತ್ತು 62 ನವಜಾತ ಶಿಶುಗಳ ಮರಣ ಸಂಭವಿಸಿರುವುದನ್ನು ಪರಿಶೀಲಿಸಿದ ಜಿಲ್ಲಾದಿಕಾರಿಗಳು, ಕ್ಲಿಷ್ಟಕರ ಹೆರಿಗೆಗಳ ಸಂದರ್ಭದಲ್ಲಿ ವೈದ್ಯರು ಅಗತ್ಯ ನಿರ್ಧಾರಗಳನ್ನು ಶೀಘ್ರದಲ್ಲಿ ತೆಗದುಕೊಳ್ಳುವ ಮೂಲಕ ತಾಯಿ ಮರಣವನ್ನು ತಪ್ಪಿಸಲು ಮುಂದಾಗಬೇಕು. ತಾಯಿ ಮತ್ತು ಶಿಶು ಮರಣವನ್ನು ಕಡಿಮೆಗೊಳಿಸಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲೆಯ ಎಲ್ಲಾ ವೈದ್ಯರಿಗೆ ತಜ್ಞರಿಂದ ಕಾರ್ಯಗಾರವನ್ನು ಆಯೋಜಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪ ಸಂಖ್ಯಾತರು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಅವರಿಗೆ ವಿವಿಧ ಸ್ವ ಉದ್ಯೋಗ ತರಬೇತಿಗಳನ್ನು ನೀಡುವಂತೆ ಹಾಗೂ ಅಗತ್ಯ ಧನ ಸಹಾಯವನ್ನು ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಯತೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಹಾಗೂ ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.