ಉಡುಪಿ, ಮಾ. 1: ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ಅನ್ನುವ ಹೆಗ್ಗಳಿಕೆ ಭಾರತಕ್ಕಿದೆ ಎಂದು ಅಂಕಣಕಾರ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು. ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ಭಾರತ್ ವಿಕಾಸ್ ಪರಿಷತ್ತು ಹಮ್ಮಿಕೊಂಡ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿದರು. ಮೊದಲ ಚುನಾವಣೆಯಿಂದ ಹಿಡಿದು ಇಂದಿನ ತನಕ ನಮ್ಮೆಲ್ಲ ಚುನಾವಣೆಗಳನ್ನು ಅತ್ಯಂತ ಸಸೂತ್ರವಾಗಿ ಸುಗಮವಾಗಿ ನಡೆಸಿಕೊಂಡು ಬಂದ ಕೀರ್ತಿ ನಮ್ಮ ಚುನಾವಣಾ ಆಯೇೂಗಕ್ಕೆ ಸಲ್ಲುತ್ತದೆ. ಮತದಾನದ ಪ್ರಮಾಣವನ್ನು ಶೇ.80ರ ಗಡಿ ದಾಟಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಈ ತಿಳುವಳಿಕೆ ನೀಡುವಲವಲ್ಲಿ ಪ್ರತಿಯೊಬ್ಬ ಹಿರಿಯರ ಜವಾಬ್ದಾರಿ ಇದೆ. ಮತದಾನ ಮಾಡುವವನೇ ಪೂರ್ಣ ಪ್ರಜೆ ಅನ್ನುವ ಮಾನ್ಯತೆ ಪಡೆಯುತ್ತಾನೆ.
ನಮ್ಮೆಲ್ಲರ ಮತಗಳ ಮೂಲಕ ಆಯ್ಕೆಯಾದ ಪ್ರತಿನಿಧಿಗಳು ಸರ್ಕಾರ ರಚನೆ ಮಾಡುತ್ತಾರೆ. ಹಾಗಾಗಿ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಸಭಾಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ಪಿ.ಕೆ.ಭಟ್ಟ ವಹಿಸಿದ್ದರು. ದಾವಣಗೆರೆಯ ಭಾ.ವಿ.ಪರಿಷತ್ತಿನ ಹಿರಿಯ ಪದಾಧಿಕಾರಿ ಪ್ರಸಾದ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಹರೇರಾಂ ಶೆಣೈ ಸ್ವಾಗತಿಸಿ, ಕೇೂಶಾಧಿಕಾರಿ ಸುಬ್ರಾಯ ಶೆಣೈ ವಂದಿಸಿದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.