ಉಡುಪಿ: ಕರ್ಜೆ ಹೊಸೂರು ಗ್ರಾಮದ ಶ್ರೀ ಸಾಯಿ ಸ್ವರಾಂಜಲಿ ವಿದ್ಯಾಲಯ (ರಿ.) ಇದರ ದ್ವಿತೀಯ ವರ್ಷದ ‘ಗಾನ ನಾಟ್ಯೋತ್ಸವ’ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿ ನೀಲಾವರದ ಮಧ್ಯಸ್ಥರಬೆಟ್ಟಿನ ಶ್ರೀ ಶಾರದಾ ಸಭಾಭವನದಲ್ಲಿ ಜರುಗಿತು.
ಬಾರಕೂರು ಐಟಿಐ ನ್ಯಾಶನಲ್ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಕ್ರಮಧಾರಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ನೃತ್ಯ ಸಂಗೀತವು ಎಲ್ಲಾ ವಿಭಾಗದಲ್ಲೂ ಪ್ರಾಮುಖ್ಯತೆ ಹೊಂದಿದೆ. ಅದರಲ್ಲಿಯೂ ಯಕ್ಷಗಾನದಲ್ಲಿ ಮಹತ್ತರ ಪಾತ್ರವನ್ನು ಗಳಿಸಿದೆ ಎಂದರು.
ಸಂಗೀತ ಗುರು ಪಿ. ರವಿರಾಜ ಉಪಾಧ್ಯಾಯರಿಗೆ ಗುರುವಂದನೆಯನ್ನು ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಕರ್ಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಸಮೃದ್ಧಿ ಮಹಿಳಾ ಮಂಡಳಿ ಪೇತ್ರಿ ಅಧ್ಯಕ್ಷೆ ಪ್ರಸನ್ನ ಪ್ರಸಾದ್ ಭಟ್, ಕನ್ನಾರು ಹೆಜ್ಜೆನಾದ ನೃತ್ಯತಂಡ ನೃತ್ಯ ಗುರು ಉದಯ್ ಕನ್ನಾರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಉದ್ಯಮಿ ಪ್ರಕಾಶ ಶ್ಯಾನುಭೋಗ್ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಮಕ್ಕಳ ಕಲಾಸಕ್ತಿಯನ್ನು ನೋಡಿ ಪೋಷಕರು ನೀರೆರೆದು ಬೆಳಸಬೇಕೆಂದರು. ಸಂಸ್ಥೆಯ ಕಾರ್ಯದರ್ಶಿ ರಾಜರಾಜೇಶ್ವರಿ ಶ್ಯಾನುಭೋಗ್ ಸ್ವಾಗತಿಸಿ, ಸಂಸ್ಥೆಯ ಸದಸ್ಯೆ ವೀಣಾ ಪ್ರಮೋದ್ ಶ್ಯಾನುಭೋಗ್ ವಂದಿಸಿದರು. ವೈ. ಎಲ್. ವಿಶ್ವರೂಪ ಮಧ್ಯಸ್ಥ ನೀಲಾವರ ಕಾರ್ಯಕ್ರಮ ನಿರೂಪಿಸಿದರು.