ಬ್ರಹ್ಮಾವರ: ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಂಯುಕ್ತ ಆಶ್ರಯದಲ್ಲಿ ಎಸ್.ಎಂ.ಎಸ್ ಕ್ರೀಡಾಂಗಣದಲ್ಲಿ ಶಿರ್ವ ಲೆಸ್ಲಿ ಡಿಸೋಜ ಮೆಮೋರಿಯಲ್ ರೋಲಿಂಗ್ ಟ್ರೋಫಿಗಾಗಿ ನಡೆದ ಉಡುಪಿ ವಲಯ ಮಟ್ಟದ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟದಲ್ಲಿ ಎಸ್.ಎಂ.ಎಸ್ ಕಾಲೇಜಿನ ಪುರುಷರ ಕ್ರಿಕೆಟ್ ತಂಡ ಎಂ.ಪಿ.ಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ತಂಡದ ವಿರುದ್ಧ ಗೆಲುವನ್ನು ಸಾಧಿಸಿ ಸತತ ಎರಡನೇ ಬಾರಿಗೆ ಶಿರ್ವ ಲೆಸ್ಲಿ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ಪಡೆದುಕೊಂಡಿದೆ.
ಎಸ್.ಎಂ.ಎಸ್ ತಂಡದ ಸಾಗರ್ ಬಾಲಕೃಷ್ಣ ನಾಯ್ಕ್ ಇವರಿಂದ ಕೂಟದ ಏಕೈಕ ಶತಕ ದಾಖಲಾಯಿತು. ಉತ್ತಮ ಬ್ಯಾಟ್ಸ್ ಮನ್ ಆಗಿ ಎಂ.ಪಿ.ಎಂ ಕಾಲೇಜು ಕಾರ್ಕಳದ ಅಜಿತ್ ಆಯ್ಕೆಯಾದರು. ಉತ್ತಮ ಬೌಲರ್ ಎಸ್.ಎಂ.ಎಸ್ ತಂಡದ ನಿತೀಶ್ ಶೆಟ್ಟಿ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಎಸ್.ಎಂ.ಎಸ್ ಕಾಲೇಜಿನ ಇಮ್ರಾನ್ ನಜೀರ್ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಓ.ಎಸ್.ಸಿ ಎಜುಕೇಶನಲ್ ಸೊಸೈಟಿ ಇದರ ಅಧ್ಯಕ್ಷರಾದ ರೆ.ಫಾ. ಎಂ ಸಿ ಮಥಾಯ್, ಪ್ರಧಾನ ಕಾರ್ಯದರ್ಶಿ ಅನಿಲ್ ಬಿ ರೋಡ್ರಿಗಸ್, ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಜೆರಾಲ್ಡ್ ಸಂತೋಷ್ ಡಿಸೋಜಾ, ಉಪನಿರ್ದೇಶಕರಾದ ಪ್ರಸನ್ನ ಬಿ.ಕೆ., ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಕೆ., ಕಾಲೇಜು ವಿಭಾಗದ ಕಾರ್ಯದರ್ಶಿಯವರಾದ ಸಿರಿಲ್ ಪಿ ಡಿಸೋಜಾ, ಖಜಾಂಚಿ ಸ್ಯಾಮ್ಸನ್ ಡಿಸೋಜಾ ಹಾಗೂ ಸದಸ್ಯರಾದ ಲವೀನಾ ಲೂಯಿಸ್ ಹಾಗೂ ಕ್ಲೆಮೆಂಟ್ ಡಿಸೋಜಾ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ವೆಂಕಟೇಶ ಭಟ್ ಉಪಸ್ಥಿತರಿದ್ದರು. ವಿಜೇತರಿಗೆ ಓ.ಎಸ್.ಸಿ ಎಜುಕೇಶನಲ್ ಸೊಸೈಟಿಯ ವತಿಯಿಂದ ನಗದು ಬಹುಮಾನ ನೀಡಲಾಯಿತು.