ಮಲ್ಪೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಐಕ್ಯುಎಸಿ, ಸಮಾಜಕಾರ್ಯ ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ-ಕರಾವಳಿ, ಗೊರೆಟ್ಟಿ ಆಸ್ಪತ್ರೆ ಕಲ್ಯಾಣಪುರ ಇವರ ಜಂಟಿ ಆಶ್ರಯದಲ್ಲಿ ನಶ ಮುಕ್ತ ಅಭಿಯಾನದ ಪ್ರಯುಕ್ತ ಮಾಹಿತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎ.ವಿ. ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ. ಪಿ.ವಿ. ಭಂಡಾರಿ ಮಾದಕ ದ್ರವ್ಯಗಳ ಬಗೆಗಿನ ತಪ್ಪು ಗ್ರಹಿಕೆಗಳ ಬಗ್ಗೆ
ವಿದ್ಯಾರ್ಥಿಗಳಿಗೆ ಅರಿವು ನೀಡಿದರು.
ಮಾದಕ ದ್ರವ್ಯಗಳ ವಿಧಗಳನ್ನು, ಮಾದಕ ದ್ರವ್ಯಗಳು ತೆಗೆದುಕೊಂಡಾಗ ಆಗುವ ವರ್ತನಾ ಬದಲಾವಣೆಗಳನ್ನು, ಮೆದುಳಿನ ಮೇಲಾಗುವ ಪರಿಣಾಮಗಳನ್ನು ಕೆಲವು ಕೇಸ್‌ಗಳ ಉದಾಹರಣೆಗಳನ್ನು ಕೊಡುವ ಮೂಲಕ ವಿವರಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಡಾ.ಎ.ವಿ. ಬಾಳಿಗಾ ಆಸ್ಪತ್ರೆಯ ಮನೋವೈದ್ಯರಾದ ಡಾ. ದೀಪಕ್ ಮಲ್ಯ ಅವರು ಸಾಮಾಜಿಕ ಕುಡಿತ ಮತ್ತು ಮದ್ಯ ವ್ಯಸನಕ್ಕಿರುವ ವ್ಯತ್ಯಾಸಗಳನ್ನು ತಿಳಿಸಿದರು. ಮಾದಕ ವ್ಯಸನಗಳೆಂದರೇನು, ಯಾವುದು ಕಾನೂನುಬದ್ಧ, ಯಾವುದು ಕಾನೂನುಬಾಹಿರ, ಮಾದಕ ವ್ಯಸನಕ್ಕೆ ಯಾಕೆ ಬಲಿಯಾಗುತ್ತಾರೆ, ಮಾದಕ ವ್ಯಸನಿಗಳ ಲಕ್ಷಣಗಳು, ನಾವು ಯಾಕೆ ಮಾದಕ ದ್ರವ್ಯಗಳಿಂದ ದೂರವಿರಬೇಕು, ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ಇವರು ವಹಿಸಿ ವಿವಿಧ ರೀತಿಯ ನಶೆಗಳಿಂದ ಮುಕ್ತರಾಗುವುದು ಅತೀ ಅಗತ್ಯವಾಗಿದೆ. ಭಾರತದಲ್ಲಿ ಯುವಜನರ ಸಂಖ್ಯೆ ಹೆಚ್ಚಿದೆ. ಈ
ಸಂಪನ್ಮೂಲ ವ್ಯರ್ಥವಾಗದೇ ಮುಖ್ಯವಾಹಿನಿಯಲ್ಲಿದ್ದರೆ ದೇಶದ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿ ದೆಸೆಯಲ್ಲಿ ಇಂತಹ ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಆದರ್ಶ ಜೀವನ ನಡೆಸಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದ ಕಾಲೇಜಿನ ಎನ್.ಎಸ್.ಎಸ್. ಯೋಜನಾಧಿಕಾರಿ ಸುಷ್ಮಾ ಟಿ, ಮಾದಕ ದ್ರವ್ಯಗಳಿಂದ ಜನರನ್ನು ದೂರವಿರಿಸುವ ಮತ್ತು ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅದರಲ್ಲೂ ಯುವಜನತೆಗೆ ಅರಿವು ಮೂಡಿಸಲು ಈ ನಶ ಮುಕ್ತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಮಾದಕ ವ್ಯಸನ ಒಂದು ಅನಿಷ್ಟದಂತೆ ಹಬ್ಬುತ್ತಿದೆ. ಹೆಚ್ಚಾಗಿ ಹದಿಹರೆಯದವರೇ ಈ ವ್ಯಸನಕ್ಕೆ ಬಲಿಯಾಗಿ ತಮ್ಮ ಅಮೂಲ್ಯ ಜೀವನವನ್ನು ದುರಂತಕ್ಕೀಡುಮಾಡುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಈ ಮಾಹಿತಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ವಿದ್ಯಾರ್ಥಿಗಳು ಜಾಗೃತರಾಗಬೇಕು ಮತ್ತು ತಮ್ಮ ಸುತ್ತಮುತ್ತಲಿನವರನ್ನು ಜಾಗೃತಗೊಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗೊರೆಟ್ಟಿ ಆಸ್ಪತ್ರೆಯ ಸಂಯೋಜಕರಾದ ರಾಕೇಶ್, ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಂಯೋಜಕ ಡಾ. ದುಗ್ಗಪ್ಪ ಕಜೆಕಾರ್, ಎನ್.ಎಸ್.ಎಸ್ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಕೆ.ಇ. ಉಪಸ್ಥಿತರಿದ್ದರು. ದ್ವಿತೀಯ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಗೌತಮಿ ಜಿ. ಸುವರ್ಣ ಕಾರ್ಯಕ್ರಮ ನಿರೂಪಿಸಿ, ದ್ವಿತೀಯ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ವೃಂದ ವಂದಿಸಿದರು.