ಉಡುಪಿ: ಉಡುಪಿ ನಗರ ಸಭೆ ಹಾಗೂ ಸಿತಾರಾ ಸಂಸ್ಥೆ (ರಿ), ದಾವಣಗೆರೆ ಇವರ ಸಹಯೋಗದಲ್ಲಿ ಸ್ವಚ್ಛ ಭಾರತ್ ಮಿಷನ್ ಐ.ಎ.ಸಿ ಚಟುವಟಿಕೆಯ ಅಡಿಯಲ್ಲಿ ಅಜ್ಜರಕಾಡಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಮದರ್ ಥೆರೆಸಾ ಹಾಗೂ ಕಿತ್ತೂರುರಾಣಿ ಚೆನ್ನಮ್ಮ ರೇಂಜರ್ಸ್ ಘಟಕದ ವಿದ್ಯಾರ್ಥಿನಿಯರು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಉಡುಪಿ, ನೆಹರು ಯುವ ಕೇಂದ್ರ ಉಡುಪಿ, ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಉಡುಪಿಯ ಬ್ರಹ್ಮಗಿರಿಯಲ್ಲಿರುವ ನಾಯರ್ ಕೆರೆಯನ್ನು ಸ್ವಚ್ಛಗೊಳಿಸುವ ಮೂಲಕ ನೆಲ ಮಟ್ಟದ ನೀರಿನ ಮೂಲಗಳ ಸಂರಕ್ಷಣಾ ಹಾಗೂ ಜಾಗೃತಿ ಕಾರ್ಯಕ್ರಮ ಆಚರಿಸಲಾಯಿತು.
ಅಂಬಲಪಾಡಿ ವಾರ್ಡಿನ ನಗರ ಸಭಾ ಸದಸ್ಯ ಹರೀಶ್ ಶೆಟ್ಟಿ ಉದ್ಘಾಟನೆ ನೆರವೇರಿಸಿದರು. ನಗರಸಭೆಯ ಪರಿಸರ ಅಭಿಯಂತರರಾದ ಸ್ನೇಹ ಮಾತನಾಡಿ ನಾಯರ್ ಕೆರೆ ಬಹಳ ಹಳೆಯ ಕೆರೆಯಾಗಿದ್ದು ಈಗಾಗಲೇ ನಗರಸಭೆಯ ಪೌರ ಕಾರ್ಮಿಕರಿಂದ ಸಾಕಷ್ಟು ಬಾರಿ ಸ್ವಚ್ಛಗೊಳಿಸಲಾಗಿದೆ.
ಪ್ರಸ್ತುತ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಈ ಕೆರೆಯನ್ನು ಸ್ವಚ್ಛಗೊಳಿಸುವುದರ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ ಮಾತನಾಡಿ, ಆಧುನಿಕ ಯುಗದಲ್ಲಿ ಪರಿಸರ ಸಂರಕ್ಷಣೆ, ಸ್ವಚ್ಛತೆ ಹಾಗೂ ನೀರಿನ ಜಲಮೂಲಗಳ ಸಂರಕ್ಷಣೆ ಕುರಿತು ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ.
ಇದೇ ರೀತಿ ತಾತ್ಸಾರವನ್ನು ಮಾಡಿದ್ದೆ ಆದಲ್ಲಿ ಮುಂದಿನ ಪೀಳಿಗೆಗೆ ನಾವು ನೀರನ್ನು ಮಾತ್ರೆಯ ಮೂಲಕ ನೀಡಬೇಕಾಗುತ್ತದೆ. ಹಿರಿಯರು ಒಂದು ನಾಣ್ಣುಡಿ ಹೇಳಿದಂತೆ ಎಲ್ಲಿ ಸ್ವಚ್ಛತೆ ಇರುತ್ತದೆ ಅಲ್ಲಿ ನಮ್ಮನ್ನು ಕಾಪಾಡುವ ದೇವರು ನೆಲೆಸಿರುತ್ತಾರೆ. ಸ್ವಚ್ಛತೆಯೇ ದೇವರು ಎಂದರೆ ತಪ್ಪಾಗಲಾರದು ಎಂದರು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷರು ಹಾಗೂ ಸಿಬ್ಬಂದಿಗಳು, ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಶಶಿರೇಖಾ ಹಾಗೂ ಸಿಬ್ಬಂದಿಗಳು, ಅಜ್ಜರಕಾಡು ಕಾಲೇಜಿನ ಬೋಧಕರು, ಸ್ಥಳೀಯರಾದ ಶಕೀಲ್ ಅಹಮದ್, ಜುಬೆನ್, ವಿನೋದಾ ಜಯಂತ, ಸುಂದರಿ ಹೌಸ್ ಮಾಲೀಕರು ಹಾಗೂ ಸಿತಾರಾ ಸಂಸ್ಥೆಯ ಸಂಯೋಜಕ ರವಿಕುಮಾರ್ ಹಾಗೂ ಹಿರೇಬಿದ್ರಿ ಸುಜಾತ ಮುಂತಾದವರು ಉಪಸ್ಥಿತರಿದ್ದರು.