ಬ್ರಹ್ಮಾವರ: ಭಾರತೀಯ ಮಹಿಳೆಯರು ಇಂದಿನ ದಿನಗಳಲ್ಲಿ ಸೌಂದರ್ಯಕ್ಕೆ ಆಸಕ್ತಿ ವಹಿಸುತ್ತಿದ್ದಾರೆ. ಈ ಸಮಯದಲ್ಲಿ ಪ್ರಸಾದನ ಕಲೆ ತಿಳಿದವರಿಗೆ ಹೆಚ್ಚು ಬೇಡಿಕೆ ಇರುವುದರಿಂದ ಆಧುನಿಕ ಬದಲಾವಣೆಗೆ ಮಹಿಳೆಯರು ಹೊಂದಿಕೊಂಡು ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ ತೋರಿಸಿ ಸಮಾಜದಲ್ಲಿ ಮುಂದೆ ಬರಬೇಕು ಎಂದು ಕೆನರಾ ಬ್ಯಾಂಕಿನ ನಿವೃತ್ತ ಉಪ ಮಹಾಪ್ರಬಂದಕರಾದ ಪ್ರದೀಪ್ ಭಕ್ತ ಅಭಿಪ್ರಾಯಪಟ್ಟರು.
ಅವರು ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ಮಹಿಳಾ ಬ್ಯೂಟೀ ಪಾರ್ಲರ್ ನಿರ್ವಹಣಾ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಜೀವನದಲ್ಲಿ ದೃಢವಾದ ವಿಶ್ವಾಸ ಇರಬೇಕು.
ಹೆದರಿಕೆ, ಅಂಜಿಕೆ ಇರಬಾರದು. ಸಾಧನೆ ಮಾಡಬೇಕೆಂದು ಹಸಿವು ಬಳಸಿಕೊಳ್ಳಿ. ನಿಮ್ಮ ಪ್ರಗತಿ ನಡೆದು ಬಂದ ದಾರಿಯ ಸಿಂಹಾವಲೋಕನ ಆಗಾಗ ಮಾಡುತ್ತಿರಿ. ರುಡ್ ಸೆಟ್ ಸಂಸ್ಥೆ ಜೊತೆಗೆ ನಿಕಟವಾದ ಸಂಪರ್ಕ ಇಟ್ಟುಕೊಳ್ಳಿ ಎಂದು ಶುಭ ಹಾರೈಸಿ ಪ್ರಮಾಣ ಪತ್ರ ವಿತರಿಸಿದರು.
ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಲಕ್ಷೀಶ್ ಎ.ಜಿ ವಹಿಸಿದ್ದರು. ಬ್ಯಾಂಕಿನ ಸೌಲಭ್ಯಗಳನ್ನು ಪಡೆದು ವ್ಯವಹಾರ ಮುಂದುವರಿಸಿ, ಸಂಸ್ಥೆಯಲ್ಲಿ ತರಬೇತಿ ಪಡೆದ ನೀವುಗಳು ನಿಮ್ಮ ಅಭಿಪ್ರಾಯವನ್ನು ಹಂಚಿಕೊಂಡು ನಿರುದ್ಯೋಗಿಗಳನ್ನು ಬೇರೆ ಬೇರೆ ತರಬೇತಿಗಳಿಗೆ ಕಳುಹಿಸಿ ಕೊಡಿ ಎಂದರು.
ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ್ ಜೈನ್ ಸ್ವಾಗತಿಸಿ, ತರಬೇತಿ ಹಿನ್ನೋಟ ನೀಡಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮವು ಮೈತ್ರಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಅನುಸೂಯ, ಸೌಜನ್ಯ, ಅಂಜಲಿ ತರಬೇತಿ ಅನುಭವ ಹಂಚಿಕೊಂಡರು. ಉಪನ್ಯಾಸಕರಾದ ಸಂತೋಷ್ ಶೆಟ್ಟಿ ವಂದಿಸಿದರು.