ಉಡುಪಿ: ಉಡುಪಿ ನಗರಸಭೆ ಹಾಗೂ ಸಿತಾರ ಸಂಸ್ಥೆ ದಾವಣಗೆರೆ ಇವರ ಸಹಯೋಗದಲ್ಲಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಘನ ತ್ಯಾಜ್ಯ ವಸ್ತು ನಿರ್ವಹಣೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಮ್ಮ ಚಿತ್ತ ಸ್ವಚ್ಛತೆಯತ್ತ ಕಾರ್ಯಕ್ರಮವು ಉಡುಪಿ ನಗರದ ಚಿತ್ಪಾಡಿ ಯಲ್ಲಿರುವ ಪಿ.ಆರ್.ಎಫ್ (ಪ್ಲಾಸ್ಟಿಕ್ ರೆಕವರಿ ಫೆಸಿಲಿಟಿ) ಘಟಕದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆಯ ಪರಿಸರ ಅಭಿಯಂತರರಾದ ಸ್ನೇಹ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಚ್ಛತೆ ಹಾಗೂ ನೈರ್ಮಲ್ಯದ ಕುರಿತು ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವ ಕಾರಣ ಸ್ವಚ್ಛತೆಯ ವಿಭಾಗದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ.
ನಗರ ಸ್ಥಳೀಯ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ನಗರದ ಎಲ್ಲಾ ಶೆಡ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ವ-ಸಹಾಯ ಸಂಘದ ಸದಸ್ಯರು ಹಾಗೂ ಘನ ತ್ಯಾಜ್ಯ ವಿಲೇವಾರಿ ವಾಹನ ಚಾಲಕರಿಗೆ ವಿಶೇಷವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಕರುಣಾಕರ್ ಮಾತನಾಡಿ, ಈ ಕಾರ್ಯಕ್ರಮವು ಐದು ಅಂಶಗಳನ್ನು ಒಳಗೊಂಡಿದ್ದು, ಕಸ ವಿಂಗಡಣೆ ಮಾಡದೆ ನೀಡಿದರೆ ತಿರಸ್ಕರಿಸುವುದು, ಸಾಧ್ಯ ವಾದಷ್ಟು ಕಸ ಮಾಡುವುದು, ಸಂಗ್ರಹಿಸಿರುವ ಕಸದಲ್ಲಿ ಬಳಸಲು ಬರುವಂತಹ ವಸ್ತುಗಳನ್ನು ಮರುಬಳಕೆ ಮಾಡುವುದು, ಬಳಸಿ ಬಿಸಾಡಿದ ವಸ್ತುಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಮರು ಉತ್ಪಾದಿಸುವುದು ಹಾಗೂ ತ್ಯಾಜ್ಯದಿಂದ ಆದಾಯ ಗಳಿಸುವುದಾಗಿದೆ. ಎಲ್ಲರೂ ಸ್ವಚ್ಛತೆಯ ಕಡೆಗೆ ಗಮನಹರಿಸುವಂತೆ ತಿಳಿಸಿದರು.
ನಗರಸಭೆಯ ಸ್ವಚ್ಚತಾ ರಾಯಭಾರಿ ಜೋಸೆಫ್ ಜಿ ಎಮ್ ರೆಬೆಲ್ಲೋ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಘನ ತ್ಯಾಜ್ಯ ವಿಲೇವಾರಿ ಘಟಕದ ಅಧ್ಯಕ್ಷೆ ವನಜಾ, ಪಿ.ಆರ್.ಎಫ್ ಶೆಡ್ ನ ಮುಖ್ಯಸ್ಥೆ ಚಂದರ, ನಗರದ ಎಲ್ಲಾ ಶೆಡ್‌ಗಳ ಕೆಲಸಗಾರರು, ಚಾಲಕರು ಹಾಗೂ ಸ್ವ-ಸಹಾಯ ಸಂಘಗಳ ಸದಸ್ಯರುಗಳು, ನಗರಸಭೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಸಿತಾರ ಸಂಸ್ಥೆಯ ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.