ಕಾರ್ಕಳ: ಮನುಷ್ಯನಿಗೆ ಯೌವ್ವನ, ಅಧಿಕಾರ, ಸಂಪತ್ತು, ಅವಿವೇಕ ಎಂಬ ನಾಕು ಅಂಶಗಳಲ್ಲಿ ಒಂದು ಅಂಶ ಹೊಕ್ಕಿದರೂ ಆತ ಪತನಗೊಳ್ಳುತಾನೆ. ಅವಿವೇಕವನ್ನು ಹೊಂದಿದವನ ಬದುಕು ನಿರ್ನಾಮಗೊಳ್ಳುತ್ತದೆ. ವಿವೇಕಿಯಾದ ವ್ಯಕ್ತಿ ತನ್ನ ವಿದ್ಯೆಯನ್ನು ಜ್ಞಾನದಾನಕ್ಕಾಗಿ, ಇತರರ ಏಳಿಗೆಗೋಸ್ಕರ ಬಳಸುತ್ತಾನೆ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಶ್ರೀ ವೀರೇಶಾನಂದ ಸರಸ್ವತೀ ಮಹಾರಾಜ್ ಹೇಳಿದರು.
ಅವರು ಶ್ರೀ ಮಹಾಗಣಪತಿ ದೇವಾಸ್ಥಾನ ಗಣಿತನಗರ ಮತ್ತು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದೊಂದಿಗೆ ನಡೆದುಕೊಂಡು ಬರುತ್ತಿರುವ ತಿಂಗಳ ಸರಣಿಯ ಕಾರ್ಯಕ್ರಮ ಮಾಲಿಕೆ ಮೌಲ್ಯಸುಧಾದ ೬ನೇ ಸಂಚಿಕೆಯಲ್ಲಿ ವಿದ್ಯಾರ್ಥಿ ಜೀವನ ಇರುವುದು ಇರಬೇಕಾದದ್ದು ಎಂಬ ವಿಷಯದ ಕುರಿತಂತೆ ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನವನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಸಮಗ್ರ ಜೀವನದ ಅಡಿಪಾಯವೇ ವಿದ್ಯಾರ್ಥಿ ಜೀವನವಾಗಿದೆ. ತಮ್ಮ ಇಡೀ ಜೀವನದ ಕಟ್ಟಡ ಕಟ್ಟೋದು ವಿದ್ಯಾರ್ಥಿ ಜೀವನದ ಅಡಿಪಾಯದ ಮೇಲೆಯೇ. ಅಡಿಪಾಯ ಎಷ್ಟು ಸುಭದ್ರವೋ ಅಷ್ಟು ಕಟ್ಟಡವು ಸುರಕ್ಷಿತ ಎಂದರು.
ವೇದಿಕೆಯಲ್ಲಿ ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ದೇಕರಾದ ಸ್ವಾಮಿ ಪರಮಾನಂದ ಓಂ ದಿವ್ಯ ಉಪಸ್ಥಿತರಿದ್ದರು. ಇದೇ ಸಂದರ್ಭ ಶ್ರೀ ಭುವನೇಂದ್ರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಪದ್ಮನಾಭ ಗೌಡ, ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಆಡಳಿತ ಮಂಡಳಿ ಸದಸ್ಯ ಶಾಂತಿರಾಜ್ ಹೆಗ್ಡೆ, ಕೌನ್ಸಿಲರ್ ಡಾ. ಪ್ರಸನ್ನ ಹೆಗ್ಡೆ, ಕಾರ್ಕಳ ಜ್ಞಾನಸುಧಾ ಪಿ.ಯು. ಪ್ರಾಂಶುಪಾಲ ದಿನೇಶ್ ಕೊಡವೂರ್, ಶ್ರೀ ಮಹಾಗಣಪತಿ ದೇವಾಸ್ಥಾನದ ಕಾರ್ಯದರ್ಶಿ ಸಾಹಿತ್ಯ, ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ ಉಪಸ್ಥಿತರಿದ್ದರು. ಉಪನ್ಯಾಸಕ ಸಂತೋಷ್ ನೆಲ್ಲಿಕಾರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.