ಕುಂದಾಪುರ: ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಸ್ವರಕ್ಷಣಾ ತಂತ್ರಗಳನ್ನು ಕಲಿತುಕೊಳ್ಳಬೇಕು. ಇದು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸಿ ಆಪತ್ತಿನ ಕಾಲದಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ ಹೇಳಿದರು.
ಅವರು ಗುಜ್ಜಾಡಿ ಗೋಪಾಲ್ ನಾಯಕ್ ರೋಟರಿ ಸಭಾಂಗಣದಲ್ಲಿ ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ, ರೋಟರಿ ಕ್ಲಬ್ ಗಂಗೊಳ್ಳಿ, ವೆಂಕಟೇಶ ಕೃಪಾ ಟ್ರೇಡರ್ಸ್ ಗಂಗೊಳ್ಳಿ, ಸುರಭಿ ಡಿಜಿಟಲ್ ಸ್ಟುಡಿಯೋ ಗಂಗೊಳ್ಳಿ, ರೋಟರಾಕ್ಟ್ ಕ್ಲಬ್ ಗಂಗೊಳ್ಳಿ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಸ್ವರಕ್ಷಾ ಫಾರ್ ವುಮೆನ್ ಸಂಸ್ಥೆಯ ವತಿಯಿಂದ ನಡೆದ ಮಹಿಳಾ ಸ್ವರಕ್ಷಣಾ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು
ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗೋಪಾಲ ಪೂಜಾರಿ, ವೆಂಕಟೇಶ ಕೃಪಾ ಟ್ರೇಡರ್ಸ್ ಮಾಲೀಕ ವಿಠಲ ಶೆಣೈ, ಸುರಭಿ ಡಿಜಿಟಲ್ ಸ್ಟುಡಿಯೋದ ಮಾಲೀಕ ಕೃಷ್ಣ ಖಾರ್ವಿ, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಒಕ್ಕೂಟದ ಜಿಲ್ಲಾಧ್ಯಕ್ಷೆ ಫಿಲೋಮಿನಾ ಫರ್ನಾಂಡಿಸ್, ಸ್ವ ರಕ್ಷಾ ಫಾರ್ ವಿಮೆನ್ ಟ್ರಸ್ಟ್ ನ ಕಾರ್ತಿಕ್ ಎಸ್ ಕಟೀಲ್ ಮತ್ತು ಶೋಭಾ ಲತಾ ಮೊದಲಾದವರು ಉಪಸ್ಥಿತರಿದ್ದರು.
ಸರಸ್ವತಿ ವಿದ್ಯಾಲಯದ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ರಮ್ಲಾ ವಂದಿಸಿದರು.