ಕೆಮ್ಮಣ್ಣು: ಚೈಲ್ಡ್ ಲೈನ್-1098, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ರೋಟರಿ ಉಡುಪಿ ಇವರ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹದ ಅಂಗವಾಗಿ ಕಾರ್ಮೆಲ್ ಪ್ರೌಢಶಾಲೆ ಕೆಮ್ಮಣ್ಣು ಇಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಯ ಕಾಯಿದೆಯ ಕುರಿತು ಅರಿವು ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷರಾದ ಬಿ.ಕೆ ನಾರಾಯಣ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು ಮತ್ತು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯದ ಕುರಿತು ಸುರಕ್ಷಿತ ಸ್ಪರ್ಶ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ ತಿಳಿಸಿದರು.
ಲೈಂಗಿಕ ದೌರ್ಜನ್ಯದ ಬಗ್ಗೆ ಜಾಗೃತರಾಗಿರಬೇಕು ಹಾಗೂ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಕಾನೂನಿನ ನೆರವನ್ನು ಪಡೆದುಕೊಳ್ಳಿ ಎಂದು ತಿಳಿಸಿದರು. ಯಾವುದೇ ರೀತಿಯಾದ ಸಮಸ್ಯೆಯಾದಲ್ಲಿ ಚೈಲ್ಡ್ ಲೈನ್ 1098 ಇದಕ್ಕೆ ಕರೆ ಮಾಡಿ ಸಹಾಯವನ್ನು ಪಡೆಯಲು ತಿಳಿಸಿದರು.
ಚೈಲ್ಡ್ ಲೈನ್-1098 ಉಡುಪಿಯ ನಿರ್ದೆಶಕರಾದ ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೈಲ್ಡ್ ಲೈನ್-1098 ಉಡುಪಿ ಕೇಂದ್ರ ಸಂಯೋಜಕರಾದ ಜ್ಯೋತಿ ಚೈಲ್ಡ್ ಲೈನ್-1098 ರ ಬಗ್ಗೆ, ಬಾಲ್ಯವಿವಾಹದ ಬಗ್ಗೆ ತಿಳಿಸಿದರು. ಮಕ್ಕಳಿಗೆ ಅವರ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಅರಿವು ಮೂಡಿಸಿದರು ಹಾಗೂ ಮಕ್ಕಳು ಯಾವ ಸಂದರ್ಭದಲ್ಲಿ ಚೈಲ್ಡ್‍ಲೈನ್-1098ಕ್ಕೆ ಕರೆ ಮಾಡಬೇಕು ಎಂದು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸಿಸ್ಟರ್ ವಿನ್ನಿ ಡಿ’ಸೋಜ ಶುಭ ಹಾರೈಸಿದರು.
ಚೈಲ್ಡ್ ಲೈನ್-1098 ಉಡುಪಿಯ ಸಿಬ್ಬಂದಿಗಳು, ಮತ್ತು ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ರೋಟರಿ ಉಡುಪಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಕಾರಂತ್ ಸ್ವಾಗತಿಸಿ ಕಾರ್ಮೆಲ್ ಶಾಲೆಯ ವಿದ್ಯಾರ್ಥಿನಿ ತ್ರಿಶಾ ವಂದಿಸಿದರು. ಚೈಲ್ಡ್ ಲೈನ್-1098 ಆಪ್ತ ಸಮಾಲೋಚಕಿ ನಯನ ಕಾರ್ಯಕ್ರಮವನ್ನು ನಿರೂಪಿಸಿದರು.