ಕಾರ್ಕಳ: ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕಾರ್ಕಳ, ರುಡ್ ಸೆಟ್ ಸಂಸ್ಥೆ ಬ್ರಹ್ಮಾವರ ಜಂಟಿ ಆಶ್ರಯದಲ್ಲಿ ತರಬೇತಿ ಕಾರ್ಯಾಗಾರ ಕಾರ್ಕಳ ತಾಲೂಕು ಪಂಚಾಯತ್ ನಲ್ಲಿ ನಡೆಯಿತು. ಮಿಯಾರಿನಲ್ಲಿ ಸಂಜೀವಿನಿ ಮಹಿಳೆಯರಿಗಾಗಿ ಬಾಳೆ ನಾರು ಉತ್ಪನ್ನಗಳಿಂದ ಕರಕುಶಲ ಉತ್ಪನ್ನಗಳನ್ನು ತಯಾರಿಸಲು ಮಹಿಳೆಯರಿಗಾಗಿ 6 ದಿನಗಳ ತರಬೇತಿ ಕಾರ್ಯಕ್ರಮವನ್ನು ಬಾಳೆ ಗಿಡಕ್ಕೆ ನೀರು ಹಾಕುವ ಮೂಲಕ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನೀಲ್ ಕುಮಾರ್ ಉದ್ಘಾಟಿಸಿದರು.
ಸಂಜೀವಿನಿ ಮಹಿಳೆಯರಿಗೆ ಪೂರಕವಾಗಿ ಬೇಕಾಗುವ ಎಲ್ಲಾ ತರಬೇತಿ ನೀಡುವ ಮೂಲಕ ಸ್ವಾಲಂಬಿಗಳಾಗಿ ಜೀವಿಸಲು ಸಹಕಾರಿ ಎಂದರು. ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗುರುದತ್ ಎಂ ಎನ್., ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯ ಉಪನ್ಯಾಸಕರಾದ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
ಎನ್.ಆರ್.ಎಲ್.ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ನಿರೂಪಿಸಿದರು. ಜಿಲ್ಲಾ ವ್ಯವಸ್ಥಾಪಕಿ ನವ್ಯಾ ಸ್ವಾಗತಿಸಿದರು. ತಾಲೂಕು ವ್ಯವಸ್ಥಾಪಕ ಗಣೇಶ್ ನಾಯ್ಕ್ ವಂದಿಸಿದರು.