ಉಡುಪಿ: ಮಾರುಕಟ್ಟೆಯಲ್ಲಿ ಜೇನಿಗೆ ಸಾಕಷ್ಟು ಬೇಡಿಕೆ ಇದ್ದು, ವಿಶೇಷವಾಗಿ ಕಲಬೆರಕೆ ಇಲ್ಲದ ಉತ್ತಮ ಗುಣಮಟ್ಟದ ಉತ್ಪನ್ನವನ್ನು ಪೂರೈಸಿದಲ್ಲಿ ಖಂಡಿತವಾಗಿಯೂ ಜೇನು ಕೃಷಿ ಸುಸ್ಥಿರ ಜೀವನೋಪಾಯಕ್ಕೆ ದಾರಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಎಚ್ ಹೇಳಿದರು.
ರುಡ್ಸೆಟ್ ಸಂಸ್ಥೆ ಬ್ರಹ್ಮಾವರ ವತಿಯಿಂದ ಎನ್.ಆರ್.ಎಲ್.ಎಂ ಪ್ರಾಯೋಜಕತ್ವದಲ್ಲಿ ನಡೆದ ಉದ್ಯಮಶೀಲತಾ ಅಭಿವೃದ್ಧಿ ಹಾಗೂ ಜೇನು ಕೃಷಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಶುಭ ಹಾರೈಸಿದರು.
ಜೇನು ಕೃಷಿಯಿಂದ ಸಂಗ್ರಹಿಸಿದ ಜೇನು ತುಪ್ಪವನ್ನು ಪ್ಯಾಕಿಂಗ್, ಬ್ರಾಂಡಿಂಗ್ ಮಾಡಿ ಎಫ್.ಎಸ್.ಎಸ್.ಎ.ಐ ನೋಂದಣಿ ಮಾಡಿಸಿಕೊಂಡು ದಕ್ಷ ಉದ್ಯಮಶೀಲತೆಯಿಂ ಮುನ್ನಡೆಯಿರಿ. ಪರಿಶ್ರಮದಿಂದ ಮಾತ್ರ ಪ್ರತಿಫಲ ಸಿಗಲು ಸಾಧ್ಯ ಎಂದರು.
ಶಿಬಿರಾರ್ಥಿಗಳ ಅನಿಸಿಕೆಯಲ್ಲಿ ವಿಶೇಷ ಚೇತನ ಶಿಬಿರಾರ್ಥಿ ಸ್ವಾವಲಂಬನೆಯ ದಾರಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವುದು ಇತರರಿಗೆ ಪ್ರೇರಣೆಯಾಗಿತ್ತು.
ಕಾರ್ಯಕ್ರಮದಲ್ಲಿ ಹೆಬ್ರಿ ತಾಲೂಕು ಯೋಜನಾಧಿಕಾರಿ ಮಹೇಶ್, ಸಂಜೀವಿನಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರಭಾಕರ್ ಆಚಾರ್, ಜಿಲ್ಲಾ ವ್ಯವಸ್ಥಾಪಕರಾದ ನವ್ಯಾ, ರುಡ್ಸೆಟ್ ಸಂಸ್ಥೆಯ ಉಪನ್ಯಾಸಕರಾದ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಗಣೇಶ್ ಕಾರ್ಯಕ್ರಮ ನಿರೂಪಿಸಿದರು, ಸುಜಾತ ಸ್ವಾಗತಿಸಿ, ಶ್ರೀಲತಾ ವಂದಿಸಿದರು.