ಕುಂದಾಪುರ: ಬಿ ಎಂ ಸುಕುಮಾರ ಶೆಟ್ಟಿ ಅಧ್ಯಕ್ಷತೆಯ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಂ.ಎಂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್. ಆಚಾರ್ಯ ಸ್ಮಾರಕ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ಸಿದ್ಧತಾ ಕಾರ್ಯಾಗಾರ ಸಾಲಿಗ್ರಾಮ ಗಣೇಶ್ ಶೆಣೈ ಅವರಿಂದ ನೆರವೇರಿತು.
ಬದ್ಧತೆಯ ಸಿದ್ಧತೆಯಿಂದಲೇ ಸಾಧ್ಯತೆ ಎನ್ನುವ ವಿಚಾರದ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಪ್ರೇರಣೆ ಮೂಡಿಸಿದ ಸಂಪನ್ಮೂಲ ವ್ಯಕ್ತಿಗಳು ತಮ್ಮ ಕಲಾ ಕುಂಚ ವೇದಿಕೆಯ ಮೂಲಕ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ 600ಕ್ಕೂ ಅಧಿಕ ಅಂಕ ಗಳಿಸುವ ಹಾಗೂ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ವಿವಿಧ ಪ್ರಶಸ್ತಿಗಳನ್ನು ನೀಡುವುದಾಗಿ ಭರವಸೆ ನೀಡುವುದರೊಂದಿಗೆ ಪ್ರತಿಜ್ಙಾ ವಿಧಿ ಬೋಧಿಸಲಾಯಿತು.
ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್, ಉಪಪ್ರಾಂಶುಪಾಲೆ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ. ಎನ್., ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಜಗದೀಶ್ ಆಚಾರ್ ಸಾಸ್ತಾನ, ವಿದ್ಯಾರ್ಥಿ ನಾಯಕರಾದ ಸಾತ್ವಿಕ್ ಮತ್ತು ಸನ್ಮಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ಸಹಾಯಕ ಮುಖ್ಯ ಶಿಕ್ಷಕ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.