ಕೋಟ: ಕೋಟದ ಪತ್ರಿಷ್ಠಿತ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದ ಕರ್ಣಾಟಕ ಬ್ಯಾಂಕ್ ಎಂ.ಡಿ ಮಹಾಬಲೇಶ್ವರ ಭಟ್ ಎಂ.ಎಸ್ ಆಯ್ಕೆಯಾಗಿದ್ದಾರೆ. ಇದೇ ಬರುವ ನವೆಂಬರ್ 15, 16 ರಂದು ಪಂಚವರ್ಣ ಯುವಕ ಮಂಡಲ ಕೋಟ ಇದರ ರಜತ ಮಹೋತ್ಸವ ಸಂಭ್ರಮಾಚರಣೆಯ ಹಿನ್ನಲ್ಲೆಯಲಿ ಕೋಟದ ಅಮೃತೇಶ್ವರಿ ದೇವಳದ ಸಮೀಪ ವರುಣತೀರ್ಥ ಕೆರೆ ಸನಿಹದಲ್ಲಿ ಆಯೋಜಿಸಲಾಗುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸದ್ಭಾವನಾ 2022 ಶೀರ್ಷಿಕೆಯಡಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯೊಂದಿಗೆ ಬೆಳ್ಳಿಯ ಶಾಶ್ವತ ಫಲಕ ನೀಡಿ ಗೌರವಿಸಲಿದೆ.
ಪಂಚವರ್ಣ ವಿಶೇಷ ಪುರಸ್ಕಾರವನ್ನು ಸಮೃದ್ಧಿ ಮಹಿಳಾ ಮಂಡಲ ಚೇರ್ಕಾಡಿ ಬ್ರಹ್ಮಾವರ, ವಿಶೇಷ ಅಭಿನಂದನೆಯನ್ನು ಮಂಗಳೂರಿನ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಅರ್ಜುನ್ ಭಂಡಾರ್ಕರ್, ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ, ಪ್ರತಿಭಾ ಪುರಸ್ಕಾರವನ್ನು ಡ್ರಾಮ ಜೂನಿಯರ್ ಪ್ರಶಸ್ತಿ ವಿಜೇತ ಸಮೃದ್ಧಿ ಕುಂದಾಪುರ ನೀಡಿ ಗೌರವಿಸಲಾಗುತ್ತದೆ.
ಎರಡು ದಿನಗಳ ಕಾಲ ಹಮ್ಮಿಕೊಳ್ಳುವ ರಜತ ಸಂಭ್ರಮದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ದತ್ತಿನಿಧಿ, ಅನಾರೋಗ್ಯ ಪೀಡಿತರಿಗೆ, ಅಶಕ್ತರಿಗೆ ಸಹಾಯ, ವಿದ್ಯಾರ್ಥಿವೇತನ, ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅಮೃತ್ ಜೋಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.