ಕಾರ್ಕಳ: ಕಾರ್ಕಳದಲ್ಲಿ ಒಂದು ವಿಶೇಷತೆ ಇದೆ. ಇಲ್ಲಿ ಕಲ್ಲಿನಿಂದ ಕೆತ್ತಿದ ಮೂರ್ತಿಗಳು ದೇಶ- ವಿದೇಶಗಳಿಗೆ ತಲುಪುತ್ತದೆ. ಅದೇ ರೀತಿ ಜ್ಞಾನಸುಧಾದಲ್ಲಿ ಪ್ರತಿಯೊಂದು ವಿದ್ಯಾರ್ಥಿಯನ್ನು ಸುಂದರ ಮೂರ್ತಿಯನ್ನಾಗಿಸಿ ದೇಶದ ಮೂಲೆ- ಮೂಲೆಗೆ ಬೇರೆ-ಬೇರೆ ಕ್ಷೇತ್ರಗಳಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿರುವುದು ಕಾರ್ಕಳಕ್ಕೆ ಮತ್ತೊಂದು ಹೆಮ್ಮೆಯ ಸಂಗತಿ ಎಂದು ಲೆಕ್ಕಪರಿಶೋಧಕ ಕಾರ್ಕಳ ನಿತ್ಯಾನಂದ ಪ್ರಭು ಹೇಳಿದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ನಡೆದ ದ್ವಿತೀಯ ಹಂತದ ಜ್ಞಾನಸುಧಾ ಪ್ರತಿಭಾ ಪುರಸ್ಕಾರ-2022ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯಾವ ವಿದ್ಯಾರ್ಥಿ ತಂದೆ- ತಾಯಿಯನ್ನು ಗೌರವಿಸುತ್ತಾರೋ ಅವರು ಸಮಾಜದ ಉನ್ನತ ಸ್ಥಾನಕ್ಕೆ ಏರುತ್ತಾರೆ. ಸಮಾಜ ಅವರನ್ನು ಗೌರವಿಸುತ್ತದೆ. ಅಂತಹ ಮಕ್ಕಳನ್ನು ಜ್ಞಾನಸುಧಾ ಶಿಕ್ಷಣ ಸಂಸ್ಥೆ ನೀಡುತ್ತಿರುವುದು
ಖುಷಿಯ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟಿ ಗಣಪತಿ ಪೈ ಮಾತನಾಡಿ, ಸಂಸ್ಥೆಯ ಅಧ್ಯಕ್ಷರು ತನ್ನಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಬೇಕು ಆ ಮೂಲಕ ವಿದ್ಯಾರ್ಥಿಗಳು ದೇಶ ಕಟ್ಟುವವರಾಗಬೇಕು ಎಂಬ ಆಶಯ ಹೊಂದಿದವರಾಗಿದ್ದಾರೆ ಎಂದರು.
ಸಂದರ್ಭ 2022-2023ನೇ ಸಾಲಿನಲ್ಲಿ ಸಂಸ್ಥೆಯಿಂದ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ತ್ರೋಬಾಲ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ಸ್ವಾತಿ ಶೆಟ್ಟಿ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಗೊಂಡ ಜ್ಞಾನಸುಧಾದ 22 ವಿದ್ಯಾರ್ಥಿಗಳನ್ನು ಮತ್ತು ಪ್ರಸ್ತುತ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಎಸ್.ಎಸ್.ಎಲ್.ಸಿಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿಕೊಂಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿ ಗೌರವಿಸಲಾಯಿತು.
ಕ್ರೀಡೆಯಲ್ಲಿ ಸಂಸ್ಥೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಿದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಸೌಜನ್ಯ ಹೆಗ್ಡೆ, ಅರುಣ್ ಕುಮಾರ್ ಹಾಗೂ ಕಿರಣ್ ಕುಮಾರ್‌ರವರನ್ನು ಸನ್ಮಾನಿಸಲಾಯಿತು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಟ್ರಸ್ಟಿ ಅನಿಲ್ ಕುಮಾರ್ ಜೈನ್, ಜ್ಞಾನಸುಧಾ ತ್ರಿವಳಿ ಸಂಸ್ಥೆಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಸಂಸ್ಥೆಯ ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ ಸ್ವಾಗತಿಸಿ, ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.