ಕೋಟ: ಕಾರಂತರು ನೆನಪಿನಂಗಳದಲ್ಲಿ ನಿತ್ಯನೂತನ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯವರ ತನಕವೂ ಮೆಚ್ಚುವ ಸಾಹಿತಿಯಾದವರು, ತನ್ನ ಸಾಧನೆಗೆ ಕ್ಷೇತ್ರದ ಮಿತಿಯಿಲ್ಲದೇ ಪ್ರತಿಯೊಂದು ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡಿದ ಕಾರಂತರು ಸಮಾಜಕ್ಕೆ ಬದುಕಿನ ನಿರೂಪಣೆಯನ್ನು ನೀಡಿದವರು. ಅವರ ಸಾಹಿತ್ಯ ಕೃಷಿ ಹಾಗೂ ಸೃಜನಶೀಲ ವ್ಯಕ್ತಿತ್ವದಿಂದ ಕಾರಂತರು ನಮಗೆ ಸ್ಪೂರ್ತಿ. ಕಾರಂತರು ನೋಬೆಲ್ ಪ್ರಶಸ್ತಿಗೆ ಆರ್ಹರು, ಅವರು ತೋರಿಸಿದ ಬಾಳ್ವೆಯ ಬೆಳಕಿನ ಹಾದಿಯಲ್ಲಿ ಬದುಕುವುದು ನಮ್ಮ ಜವಾಬ್ದಾರಿ ಎಂದು ಕಾರಂತ ಪ್ರತಿಷ್ಠಾನದ ಟ್ರಸ್ಟಿ, ಉಪನ್ಯಾಸಕ ಜಿ ಸಂಜೀವ್ ಅವರು ಹೇಳಿದರು.
ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ.)ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್(ರಿ.)ಉಡುಪಿ ಸಹಯೋಗದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 17 ನೇ ವರ್ಷದ ಸಂಭ್ರಮದ ಸಾಹ್ಯಿತ್ಯಿಕ – ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿತ-2021 (ಎಣೆಯಿಲ್ಲದ ಚಕಿತ) ಕಾರ್ಯಕ್ರಮದ ಆರನೇ ದಿನದ ಕಾರಂತರ ಚಿಂತನ ಹಾಗೂ ತಂತ್ರಾಡಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾರಂಗ ಇವರ ಯಕ್ಷಗಾನ ವೀರ ರಾಣಿ ಕಿತ್ತೂರ ಚೆನ್ನಮ್ಮ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ ಅವರು, ಕಾರಂತ ಥೀಮ್ ಪಾರ್ಕಿನಲ್ಲಿ ದಿನನಿತ್ಯ ಎಂಬಂತೆ ಸಾಹಿತ್ಯಿಕ- ಸಾಂಸ್ಕೃತಿಕ ಚಟುವಟಿಕೆ ನಡೆಯುತ್ತಿರುವುದು ಮಕ್ಕಳ ಬೌದ್ಧಿಕ ವಿಕಸನಕ್ಕೆ ಸಹಕಾರಿ. ಕಾರಂತರಿಗೆ ಮಕ್ಕಳ ಬಗ್ಗೆ ಇದ್ದ ಕಾಳಜಿ ತುಡಿತ ನಮಗೆಲ್ಲ ಮಾದರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ ವಹಿಸಿದ್ದು ವೇದಿಕೆಯಲ್ಲಿ ಸದಸ್ಯೆ ಸೀತಾ ಉಪಸ್ಥಿತರಿದ್ದರು.
ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮ ಸ್ವಾಗತಿಸಿ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಸ್ತಾಪಿಸಿ, ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ಶೈಲಾ ಎಸ್ ಪೂಜಾರಿ ವಂದಿಸಿದರು. ಪಂಚಾಯತ್ ಸದಸ್ಯೆ ವಿದ್ಯಾ ಸಾಲಿಯಾನ್ ನಿರೂಪಿಸಿದರು.