ಉಡುಪಿ: ಉಡುಪಿಯ ಅಜ್ಜರಕಾಡು ಭುಜಂಗ ಪಾರ್ಕ್ ಬಳಿ ನಿರ್ಮಿಸಲಾಗುತ್ತಿರುವ ಗಾಂಧೀ ಭವನ ಕಟ್ಟಡವು ಇಡೀ ರಾಜ್ಯಕ್ಕೆ ಮಾದರಿಯಾಗುವಂತೆ ನಿರ್ಮಾಣಗೊಳ್ಳಲಿ ಎಂದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಇಂದು ಅಜ್ಜರಕಾಡು ಭುಜಂಗಪಾರ್ಕ್ ನಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ ವತಿಯಿಂದ ನಡೆದ ಗಾಂಧೀ ಭವನ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಯುವ ಜನತೆಗೆ ತಿಳಿಸುವ ಉದ್ದೇಶದಿಂದ 3 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಗಾಂಧೀ ಭವನದ ಕಾಮಗಾರಿಯನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಿ, ಸಾರ್ವಜನಿಕರಿಗೆ ಇದರ ಪ್ರಯೋಜನ ದೊರೆಯುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಗಾಂಧೀ ಭವನ ಕಟ್ಟಡವನ್ನು ಯಾವುದೇ ರಾಸಾಯನಿಕ ವಸ್ತು (ಸಿಮೆಂಟ್, ಸ್ಟೀಲ್ ) ಬಳಸದೇ ಜಿಲ್ಲೆಯಲ್ಲಿ ದೊರೆಯುವ ನೈಸರ್ಗಿಕ ವಸ್ತುಗಳನ್ನು ಬಳಸಿ, ಪರಿಸರ ಸ್ನೇಹಿಯಾಗಿ ನಿರ್ಮಾಣ ಮಾಡಲಿದ್ದು, ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಮಾದರಿಯಲ್ಲಿ ಕಟ್ಟಡ ನಿರ್ಮಾಣವಾಗಲಿದ್ದು, ಮ್ಯೂಸಿಯಂ, ಆರ್ಟ್ ಗ್ಯಾಲರಿ, ಮಹಾತ್ಮ ಗಾಂಧೀಜಿ ಅವರ ಪ್ರತಿಮೆ, ಸಭಾಂಗಣ ಕೂಡಾ ಇದರಲ್ಲಿ ಇರಲಿದೆ ಎಂದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಗಾಂಧೀಜಿ ಅವರ ವಿಚಾರ ಧಾರೆಗಳ ಸಂದೇಶಗಳನ್ನು ಗಾಂಧೀ ಭವನದಲ್ಲಿ ಅಳವಡಿಸಬೇಕು, ಹಿರಿಯರಿಂದ ಕಿರಿಯರವರೆಗೆ ಎಲ್ಲರಿಗೂ ಇದರ ಪ್ರಯೋಜನ ದೊರೆಯಬೆಕು, ಶಾಲಾ ಮಕ್ಕಳಿಗೆ ಇದೊಂದು ಕಲಿಕೆಯ ತಾಣವಾಗಬೇಕು ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಕೆ. ಉದಯ್ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ಕೊಳ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ, ನಗರಸಭೆಯ ಸದಸ್ಯರುಗಳು ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಸ್ವಾಗತಿಸಿ, ವಂದಿಸಿದರು.