ಉಡುಪಿ: ಗಂಗೊಳ್ಳಿ ಭಾಗದ ಮೀನುಗಾರರ ಬಹು ದಶಕಗಳ ಬೇಡಿಕೆಯಾಗಿದ್ದ ಸುಮಾರು 12 ಕೋಟಿ ವೆಚ್ಚದಲ್ಲಿ ನೂತನ ಮೀನುಗಾರಿಕೆ ಜೆಟ್ಟಿ ಅವೈಜ್ಞಾನಿಕ ಕಾಮಗಾರಿಯಿಂದ ನಿರ್ಮಾಣ ಹಂತದಲ್ಲೇ ಕುಸಿತಗೊಂಡು ಸಾವಿರಾರು ಮೀನುಗಾರರು ಸಂಕಷ್ಟಕ್ಕೀಡಾಗಿದ್ದು, ಸರಕಾರ ಕೂಡಲೇ ಗುತ್ತಿಗೆದಾರ ಕಂಪೆನಿ ಹಾಗೂ ಇಲಾಖೆಯ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಬೈಂದೂರು ಶಾಸಕ ಬಿ. ಎಂ ಸುಕುಮಾರ್ ಶೆಟ್ಟಿ ಹಾಗೂ ಸಂಸದ ಬಿ. ವೈ. ರಾಘವೇಂದ್ರ ವಿಶೇಷ ಮುತುವರ್ಜಿಯಿಂದ ಮಂಜೂರುಗೊಂಡ ಈ ಮಹತ್ವದ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯಿಂದ ಕುಸಿತಗೊಂಡು ನಾಡದೋಣಿ, ಟ್ರಾಲ್ ಬೋಟ್ ಸಹಿತ ಸಾವಿರಾರು ಮಂದಿ ಮೀನುಗಾರರಿಗೆ ಸಮಸ್ಯೆ ಸೃಷ್ಟಿಯಾಗಿದ್ದು, ಸ್ಥಳೀಯ ಮೀನುಗಾರರು ಮೀನುಗಾರಿಕೆಗೆ ದೂರದ ಭಟ್ಕಳ ಬಂದರನ್ನು ಆಶ್ರಯಿಸುವಂತಾಗಿದೆ.
ಈಗಾಗಲೇ ಈ ಗುತ್ತಿಗೆದಾರ ನಡೆಸಿರುವ ಹಲವು ಕಾಮಗಾರಿಗಳಲ್ಲೂ ಹಲವು ಸಮಸ್ಯೆಗಳು ಗೋಚರಿಸಿದ್ದು, ಎಲ್ಲಾ ಟೆಂಡರ್‌ಗಳನ್ನು ರದ್ದುಗೊಳಿಸಿ ಎಲ್ಲಾ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.
ತಮಿಳುನಾಡು ರಾಜ್ಯದ ಮಾದರಿಯಲ್ಲೇ ಮೀನುಗಾರಿಕಾ ಇಲಾಖೆಯಲ್ಲಿ ಪ್ರತ್ಯೇಕ ಇಂಜಿನಿಯರಿಂಗ್ ವಿಭಾಗವನ್ನು ಆರಂಭಿಸಿ ಇಲಾಖೆಯ ಎಲ್ಲಾ ಕಾಮಗಾರಿಗಳು ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಲು ಸರಕಾರ ಯೋಜನೆ ರೂಪಿಸುವ ಅವಶ್ಯಕತೆಯಿದ್ದು, ಈ ಮೂಲಕ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ಮೀನುಗಾರಿಕೆ ಅಭಿವೃಧ್ದಿಗೆ ಪೂರಕ ಯೋಜನೆಗಳು ಮೀನುಗಾರರ ಅವಶ್ಯಕತೆಯ ತಕ್ಕಂತೆ ನಿರ್ಮಾಣಗೊಳ್ಳಲು ಸಹಕಾರಿಯಾಗಲಿದೆ.
ಮುಂದಿನ ದಿನಗಳಲ್ಲಿ ಮೀನುಗಾರಿಕೆ ಇಲಾಖೆಯ ಕಾಮಗಾರಿಗಳ ಅನುಷ್ಠಾನ ಹಂತದಲ್ಲಿ ಅನುಭವಿ ಮೀನುಗಾರರನ್ನೊಳಗೊಂಡ ಮೇಲುಸ್ತುವಾರಿ ಸಮಿತಿಯನ್ನು ರಚಿಸುವ ಮೂಲಕ ಕಾಮಗಾರಿಯನ್ನು ಪ್ರತಿ ಹಂತದಲ್ಲಿ ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ನಡೆಸಲು ಅನುವು ಮಾಡಬೇಕು.
ಪ್ರಧಾನಿ ನರೇಂದ್ರ ಮೋದಿ ಅವರು ಮೀನುಗಾರಿಕೆ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಸಾಗರಮಾಲಾ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗಳ ಮೂಲಕ ಕರಾವಳಿಯ ೩ ಜಿಲ್ಲೆಗಳಲ್ಲಿ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಹಲವು ಯೋಜನೆಗಳು ಅನುಷ್ಠಾನದ ಹಂತದಲ್ಲಿದ್ದು ಈ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನ ನಡೆಸಲು ಸರಕಾರ ವಿಶೇಷ ಮುತುವರ್ಜಿ ವಹಿಸಿ ಮೀನುಗಾರರಿಗೆ ಸಕಾಲದಲ್ಲಿ ಯೋಜನೆಯ ಉಪಯೋಗವಾಗುವಂತೆ ಮಾಡಬೇಕು.
ಗಂಗೊಳ್ಳಿಯಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಮುನ್ನೆಚರಿಕೆ ವಹಿಸಿ, ಇಲಾಖೆಯ ಸಚಿವರಿಗೆ, ಸ್ಥಳೀಯ ಸಂಸದರು ಹಾಗೂ ಶಾಸಕರ ಮೀನುಗಾರರ ಪರಕಾಳಜಿಗೆ ಕಪ್ಪು ಚುಕ್ಕೆ ಬರದಂತೆ ಕಾರ್ಯನಿರ್ವಹಿಸಿ, ಗಂಗೊಳ್ಳಿ ಜೆಟ್ಟಿ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿ ವೈಜ್ಞಾನಿಕ ರೀತಿಯಲ್ಲಿ ಮರುಪ್ರಾರಂಭಿಸಿ ಮೀನುಗಾರಿಕೆ ಚಟುವಟಿಕೆಗೆ ಅನುಕೂಲ ಮಾಡಲು ಕ್ರಮ ಕೈಗೊಳ್ಳುವಂತೆ ಸಮಸ್ತ ಮೀನುಗಾರರ ಪರವಾಗಿ ಯಶ್‌ಪಾಲ್ ಸುವರ್ಣ ಆಗ್ರಹಿಸಿದ್ದಾರೆ.