ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ನಗರದ ಅಲೆವೂರು ಪ್ರಗತಿನಗರ ಡಾ. ಶಿವರಾಮ ಕಾರಂತ ಕಲಾಗ್ರಾಮದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಸಭಾಂಗಣದಲ್ಲಿ ವಿಶೇಷ ಘಟಕ ಯೋಜನೆಯಡಿ ಜನಪರ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಇಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ತುಳುಕೂಟದ ಜಿಲ್ಲಾ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಅನಾದಿ ಕಾಲದಿಂದ ಕಲೆ, ಸಂಸ್ಕೃತಿ, ಸಂಭ್ರಮವನ್ನು ಬಿಂಬಿಸುವ ಜನಪದ ಕಲೆಗಳು, ಸರ್ವಕಾಲಕ್ಕೂ ಮನರಂಜನೆಯನ್ನು ನೀಡುವುದರ ಜೊತೆಗೆ ನಮ್ಮ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ.
ಇಂದಿನ ವಿಧ್ಯಾರ್ಥಿಗಳು ವಿದ್ಯಾರ್ಜನೆಯ ಜೊತೆಗೆ ಇಂತಹ ಕಲೆಗಳನ್ನು ಕಲಿತು ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಡಾ. ಗಣನಾಥ ಎಕ್ಕಾರು ಮಾತನಾಡಿ, ಸಂಸ್ಕೃತಿ, ಸಾಂಸ್ಕೃತಿಕ ಕಲೆಯ ಪರಿಚಯದಿಂದ ವ್ಯಕ್ತಿತ್ವದಲ್ಲಿ ಬದಲಾವಣೆ ತರಲು ಸಾಧ್ಯ. ನಾಟಕ, ಯಕ್ಷಗಾನ, ಮುಂತಾದ ಕಲೆಗಳನ್ನು ಕಿರಿಯರಿಗೆ ಪರಿಚಯಿಸುವುದು ಅತಿಮುಖ್ಯವಾಗಿದೆ.
ಸಾಂಸ್ಕೃತಿಕ ಕಲೆಗಳ ಮೇಲಿರುವ ಆಸಕ್ತಿಯಿಂದ ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ಕಲೆಯಲ್ಲಿ ತೊಡಗಿಸಿಕೊಂಡವರು, ಉಳಿದವರಿಗಿಂತ ತಮ್ಮ ವ್ಯಕ್ತಿತ್ವದಲ್ಲಿ ಭಿನ್ನವಾಗಿರುತ್ತಾರೆ. ಅಂತವರು ಸಜ್ಜನಿಕೆ, ಸೌಮ್ಯತೆ, ಸಾಮಾಜಿಕ ಕಾಳಜಿ ಉಳ್ಳವರಾಗಿರುತ್ತಾರೆ.
ಇಂದಿನ ವಿಧ್ಯಾರ್ಥಿಗಳಿಗೆ ಇಂತಹ ಕಲೆಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕು. ಆ ಮೂಲಕ ಮಕ್ಕಳಲ್ಲಿ ಕೌಶಲ್ಯ, ಜ್ಞಾನ, ಮೌಲ್ಯ ವೃದ್ಧಿಸಲು ಸಾಧ್ಯವಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್ ಪಿ., ರಾಜೀವನಗರ ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಲಕೃಷ್ಣ ಕೆ.ಇ.ಎಸ್., ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎಸ್.ಪ್ರಸಾದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಂಗೀಲು, ಕೊಳಲುವಾದನ, ಕಂಸಾಳೆ, ವೀರಗಾಸೆ, ಪೂಜಾಕುಣಿತ, ಹಾಲಕ್ಕಿ ಸುಗ್ಗಿ ಕುಣಿತ, ಡೊಳ್ಳು ಕುಣಿತ, ಆಟಿ ಕಳಂಜ, ಬೇಡರ ಕುಣಿತ, ಕರಗ ಕೋಲಾಟ, ಭರತನಾಟ್ಯ ಸಮೂಹ ನೃತ್ಯ, ಜಾನಪದ ಸಮೂಹ ನೃತ್ಯ, ಪಟ ಕುಣಿತ, ನಂದಿಧ್ವಜ, ಚಿಲಿಪಿಲಿ ಗೊಂಬೆ ಮುಂತಾದ ಕಲಾತಂಡಗಳಿಳಿಂದ ಪ್ರದರ್ಶನ ನಡೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಅಮಿತಾಂಜಲಿ ನಿರೂಪಿಸಿ, ವಂದಿಸಿದರು.