ಉಡುಪಿ: ಶ್ರೀ ಕಾಳಿಕಾಂಬಾ ಭಜನಾ ಸಂಘ (ರಿ.) ತೆಂಕನಿಡಿಯೂರು, ಶ್ರೀ ದೇವಿ ಮಹಿಳಾ ಮಂಡಳಿ ಮತ್ತು ಬಾಲ ಸಂಸ್ಕಾರ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ಪೂಜೆಯು ಪುರೋಹಿತ್ ಉದ್ಯಾವರ ವಿಶ್ವನಾಥ ಆಚಾರ್ಯ ನೇತೃತ್ವಲ್ಲಿ ನಡೆಯಿತು.
ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಜನಾ ಸಂಘದ ಅಧ್ಯಕ್ಷರಾದ ಟಿ. ಕೃಷ್ಣ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪುರೋಹಿತ್ ಉದ್ಯಾವರ ವಿಶ್ವನಾಥ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಕುಂಜಿಬೆಟ್ಟಿನ ಶ್ರೀ ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷೆ ರಾಜೀವಿ ವಿಠಲ ಆಚಾರ್ಯ ಮಾತನಾಡಿ, ಮಾನವನಿಗೆ ಸಂಸ್ಕಾರ ಅತೀ ಅಗತ್ಯವಾಗಿ ಬೇಕಾಗಿದೆ. ಎಳವೆಯಲ್ಲಿಯೇ ರಾಮಾಯಣ, ಮಹಾಭಾರತ ಹಾಗೂ ಇತರ ಮೌಲ್ಯಯುತ ನೀತಿಗಳನ್ನು ಮತ್ತು ಸಂಸ್ಕಾರವನ್ನು ಪರಿಣಾಮಕಾರಿಯಾಗಿ ನೀಡಿದರೆ ಮಕ್ಕಳ ಮುಂದಿನ ಜೀವನ ಯಶಸ್ವಿಯಾಗಿರುತ್ತದೆ ಎಂದು ಹೇಳಿದರು.
ವಿದ್ಯಾನಿಧಿ ಶಾಶ್ವತ ದತ್ತಿ ನಿಧಿಯಿಂದ ಬಂದ ವಾರ್ಷಿಕ ಬಡ್ಡಿ ಮೊತ್ತ ಸುಮಾರು ರೂ.38,000 ನ್ನು ತೆಂಕನಿಡಿಯೂರು ಗ್ರಾಮದ ಅರ್ಹ ವಿಶ್ವಕರ್ಮ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಭಜನಾ ಸಂಘದ ಸದಸ್ಯ ಮಾಧವ ಕೆ ಆಚಾರ್ಯ ವಿದ್ಯಾರ್ಥಿವೇತನ ಕಾರ್ಯಕ್ರಮ ನಿರ್ವಹಿಸಿದರು.
ರಥಶಿಲ್ಪಿ ಬಾಬು ಆಚಾರ್ಯ ಮಾಣಿಬೆಟ್ಟು ಶಿರ್ವ ಹಾಗೂ ಭಜನಾ ಸಂಘದ ಹಿರಿಯ ಸದಸ್ಯ ಪದ್ಮನಾಭ ಆಚಾರ್ಯ ತೆಂಕನಿಡಿಯೂರು ಇವರನ್ನು ಸನ್ಮಾನಿಸಲಾಯಿತು. ಉಮೇಶ್ ಜಿ. ಆಚಾರ್ಯ,ಶಾಲಿನಿ ರವೀಂದ್ರ ಆಚಾರ್ಯ ಸನ್ಮಾನ ಪತ್ರ ವಾಚಿಸಿದರು.
ವೇದಿಕೆಯಲ್ಲಿ ಶ್ರೀ ದೇವಿ ಮಹಿಳಾ ಮಂಡಳಿಯ ಗೌರವ ಅಧ್ಯಕ್ಷೆ ಅಪ್ಪಿ ಶಿವಯ್ಯ ಆಚಾರ್ಯ, ಅಧ್ಯಕ್ಷೆ ಶೀಲಾ ವಾದಿರಾಜ ಆಚಾರ್ಯ ಉಪಸ್ಥಿತರಿದ್ದರು.
ಉಮೇಶ್ ಜೆ ಆಚಾರ್ಯ ಸ್ವಾಗತಿಸಿ, ದೇವಿ ಮಹಿಳಾ ಮಂಡಳಿಯ ಕಾರ್ಯದರ್ಶಿ ಉಷಾ ಶ್ರೀಧರ ಆಚಾರ್ಯ ವಂದಿಸಿದರು. ಸುಷ್ಮಾ ರಾಜೇಶ ಆಚಾರ್ಯ ಕಂಗಣಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.