ಉಡುಪಿ: ಶ್ರೀ ಸಂಸ್ಥಾನ ಗೋಕರ್ಣ ಪಾರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶತೀರ್ಥ ಸ್ವಾಮೀಜಿಯವರು ಪೀಠಾಧಿಪತಿಗಳಾದ ಬಳಿಕ ಪ್ರಪ್ರಥಮ ಬಾರಿಗೆ ಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ಇಂದು ಸಂಜೆ (ಸೆಪ್ಟೆಂಬರ್ 18) ಭೇಟಿ ನೀಡಲಿದ್ದಾರೆ.
ಸಂಜೆ 5:30ಕ್ಕೆ ಸರಿಯಾಗಿ ಐಡಿಯಲ್ ಸರ್ಕಲ್ ನಲ್ಲಿ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಚಂಡೆ ವಾದನ, ವೇದ ಘೋಷಗಳೊಂದಿಗೆ ಶ್ರೀ ದೇವಳಕ್ಕೆ ವೈಭವೊಪೇತವಾಗಿ ಸ್ವಾಮೀಜಿಯವರನ್ನು ಬರಮಾಡಿಕೊಳ್ಳಲಾಗುವುದು.
ಬಳಿಕ ಶ್ರೀ ದೇವರ ಭೇಟಿ, ಶ್ರೀ ಭಾಗವತ ಸಪ್ತಾಹದ ವೇದಿಕೆಗೆ ಆಗಮನ, ಶ್ರೀಗಳವರಿಂದ ಶ್ರೀ ಭಾಗವತ ಗ್ರಂಥಕ್ಕೆ ಮಂಗಳಾರತಿ, ಹತ್ತು ಸಮಸ್ತರಿಂದ ಪಾದಪೂಜೆ ಮಾಲಾರ್ಪಣೆ, ಭಾಗವತ ಸಪ್ತಾಹದ ಸೇವಾದಾರರಾದ ಜಗದೀಶ್ ಪೈ ಕುಟುಂಬದವರಿಂದ ಶ್ರೀಗಳಿಗೆ ಪಾದ ಪೂಜೆ.
ಶ್ರೀ ಭಾಗವತ ಸಪ್ತಾಹ ಪ್ರವಚನವನ್ನು ಮಾಡುತ್ತಿರುವ ವಿದ್ವಾಂಸರಾದ ವಿ. ಅನಂತ ಕೃಷ್ಣಾಚಾರ್ಯ ಇವರಿಗೆ ಶ್ರೀಗಳಿಂದ ಫಲ ಮಂತ್ರಾಕ್ಷತೆಯೊಂದಿಗೆ ಸನ್ಮಾನ. ಹತ್ತು ಸಮಸ್ತರು, ವೈದಿಕರು ಮತ್ತು ಸಮಾಜ ಬಾಂಧವರಿಗೆ ಶ್ರೀಗಳಿಂದ ಫಲ ಮಂತ್ರಾಕ್ಷತೆ.
ಕಾರ್ಯಕ್ರಮದ ನಂತರ ಶ್ರೀಗಳವರನ್ನು ಕುಮಟಾ ಮೊಕ್ಕಾಂಗೆ ಬೀಳ್ಕೊಡಲಾಗುವುದು. ಸಮಾಜ ಬಾಂಧವರು 15 ನಿಮಿಷ ಮುಂಚಿತವಾಗಿ ಸೇರಬೇಕು ಮತ್ತು ಪಾದ ನಡಿಗೆಯಲ್ಲಿ ಭಜನಾ ಸಂಕೀರ್ತನೆಗೆ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.