ಬ್ರಹ್ಮಾವರ: ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೃಷಿ ವಿಜ್ಜಾನ ಕೇಂದ್ರ ಬ್ರಹ್ಮಾವರ ಇವರ ಆಶ್ರಯದಲ್ಲಿ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿ ಸಖಿ ಯರಿಗೆ) ಪರಿಸರ ಕೃಷಿ ವಿಧಾನಗಳ 6 ದಿನದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಬ್ರಹ್ಮವಾರದ ಕೃಷಿ ವಿಜ್ಜಾನ ಕೇಂದ್ರದಲ್ಲಿ ನೆಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಬಾಬು ಎಂ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಈಗಾಗಲೇ ಸರಕಾರದಿಂದ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರಿಗೆ ಕೃಷಿ ಜೀವನೋಪಾಯ ವಿಷಯಗಳ ಬಗ್ಗೆ ಮಾಹಿತಿ, ವಿವಿಧ ತರಬೇತಿ ಹಾಗೂ ಸರಕಾರದ ಯೋಜನೆಗಳನ್ನು ತಲುಪಿಸಲು ಕೃಷಿ ಸಖಿಯರನ್ನು ನಿಯೋಜನೆ ಮಾಡಲಾಗಿದೆ.
ಕೃಷಿ ಸಖಿಯರು ತಮ್ಮ ಗ್ರಾಮದ ಸಂಜೀವಿನಿ ಮಹಿಳೆಯರಿಗೆ ಕೃಷಿ ಸಂಬಂಧಿಸಿದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು, ಆ ಮೂಲಕ ಗ್ರಾಮೀಣ ಮಟ್ಟದ ಮಹಿಳೆಯರನ್ನು ಇನ್ನಷ್ಟು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲೀಕರಣಗೊಳಿಸಲು ಸಹಕರಿಸಬೇಕು ಎಂದರು.
ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ ಸಹ ಸಂಶೋಧನಾ ನಿರ್ದೇಶಕರಾದ ಡಾ. ಲಕ್ಷ್ಮಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷಿ ಸಖಿಯರ ಪಾತ್ರ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಹತ್ವದಾಗಿದೆ. ಕೃಷಿ ಸಂಬಂಧಿಸಿದ ಯೋಜನೆಗಳನ್ನು ಜನರಿಗೆ ತಲುಪಿಸಲು ಸಂಬಂಧಪಟ್ಟ ಇಲಾಖೆಯ ಸಹಕಾರ ಪಡೆದು ಕೃಷಿ ಸಖಿಯರು ಕೆಲಸ ನಿರ್ವಹಿಸುವಂತೆ ತಿಳಿಸಿದರು.
ಕೃಷಿ ಮಹಾವಿದ್ಯಾಲಯ ಬ್ರಹ್ಮಾವಾರ ಪ್ರಾಂಶುಪಾಲರಾದ ಡಾ. ಸುಧೀರ್ ಕಾಮತ್ ಕೆ.ವಿ., ಜಿಲ್ಲಾ ಪಂಚಾಯತ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ್ ಆಚಾರ್, ಸಮಂತ್ ಶೆಟ್ಟಿ, ಯುವ ವೃತ್ತಿಪರರು ಹಾಗೂ ವಿಜ್ಞಾನಿಗಳು ಉಪಸ್ಥಿತರಿದ್ದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ನಿರ್ದೇಶಕರಾದ ಡಾ. ಬಿ ಧನಂಜಯ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ವಂದಿಸಿದರು. ಕೃಷಿ ಕೇಂದ್ರ ಬ್ರಹ್ಮಾವಾರ ವಿಜ್ಞಾನಿ ಡಾ. ಸಚಿನ್ ಯು ಎಸ್ ಕಾರ್ಯಕ್ರಮ ನಿರೂಪಿಸಿದರು.