ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಇಲ್ಲಿನ ಎಂ.ಎಸ್.ಡಬ್ಲ್ಯು ವಿಭಾಗದ ಸಮಾಜಕಾರ್ಯ ಗ್ರಾಮೀಣ ಶಿಬಿರವು ಕಲ್ಯಾಣಪರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ಪಂದನ ವಿಶೇಷ ಮಕ್ಕಳ ಶಾಲೆಯಲ್ಲಿ ಇಂದು ಉದ್ಘಾಟನೆಗೊಂಡಿತು.
ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ದೇವಾಡಿಗ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಶಿಬಿರಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾದ ಚೈತನ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಉಮೇಶ್ ಎನ್ ಇವರು ಮಾತನಾಡಿ ದಿವ್ಯಾಂಗರ ಯೋಗಕ್ಷೇಮಕ್ಕಾಗಿ ನಡೆಸುತ್ತಿರುವ ಸ್ಪಂದನ ವಿಶೇಷ ಶಾಲೆಯಲ್ಲಿ ಸಮಾಜಕಾರ್ಯ ವಿದ್ಯಾರ್ಥಿಗಳು ಈ ಹಿಂದೆಯೂ ಕ್ಷೇತ್ರಕಾರ್ಯ ಮಾಡಿದ್ದಾರೆ.
ಸಮಾಜಕಾರ್ಯ ಪದವಿ ವೈಶಿಷ್ಟ್ಯತೆಯಿಂದ ಕೂಡಿದ್ದು ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವಂತೆ ರೂಪಿತವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಂ.ಎಸ್.ಡಬ್ಲ್ಯು ವಿಭಾಗದ ಸಂಚಾಲಕರಾದ ಡಾ. ದುಗ್ಗಪ್ಪ ಕಜೆಕಾರ್ ಮಾತನಾಡಿ, ಸಮಾಜಕಾರ್ಯ ಗ್ರಾಮೀಣ ಶಿಬಿರದ ಎಲ್ಲಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾಜಕಾರ್ಯ ಸಹಾಯಕ ಪ್ರಾಧ್ಯಾಪಕರಾದ ಸುಷ್ಮಾ ಟಿ. ಪ್ರಾಸ್ತಾವಿಕ ಮಾತುಗಳನ್ನಾಡಿ ಸಮಾಜಕಾರ್ಯ ಗ್ರಾಮೀಣ ಶಿಬಿರದ ಪ್ರಸ್ತುತತೆ ಮತ್ತು ಶಿಬಿರದ ಯೋಜನೆಗಳನ್ನು ತಿಳಿಸಿದರು. ವೇದಿಕೆಯಲ್ಲಿ ಗೊರೆಟ್ಟಿ ಆಸ್ಪತ್ರೆಯ ಸಮಾಜ ಕಾರ್ಯಕರ್ತರಾದ ರಾಕೇಶ್, ಕಲ್ಯಾಣಪುರ ಗ್ರಾಮ ಪಂಚಾಯತ್ ಸದಸ್ಯರಾದ ಜ್ಯೋತಿ ಡಿಸೋಜ ಉಪಸ್ಥಿತರಿದ್ದರು.
ಕಾಲೇಜಿನ ಸಮಾಜಕಾರ್ಯ ವಿಭಾಗದ ಉಪನ್ಯಾಸಕರಾದ ಡಾ. ಪ್ರಮೀಳ ಜೆ. ವಾಜ್, ರವಿ ಎಸ್., ಉಷಾ, ಸಹನ ಎಸ್. ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ಆರಂಭದಲ್ಲಿ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿ ನಂದನ್ ಹೆಗ್ಡೆ ಸ್ವಾಗತಿಸಿ, ರಕ್ಷಿತಾ ವಂದಿಸಿದರು. ಮೆಲಿಟ ಲಿಡಿಯ ಡಿ’ಅಲ್ಮೆಡ ಕಾರ್ಯಕ್ರಮ ನಿರ್ವಹಿಸಿದರು.
ಏಳು ದಿನಗಳ ಈ ಶಿಬಿರದಲ್ಲಿ ಬೀದಿ ನಾಟಕ, ಜಾಥಾ, ಗ್ರಾಮ ಸಮೀಕ್ಷೆ, ಗ್ರಾಮದ ಹಿರಿಯರೊಂದಿಗೆ ಸಂವಾದ, ಸ್ಥಳೀಯ ಸಮುದಾಯ ಆಧಾರಿತ ಸಂಸ್ಥೆಗಳ ಭೇಟಿ, ಗ್ರಾಮ ಪಂಚಾಯತ್ ಭೇಟಿ, ಎನ್.ಜಿ.ಒ. ಗಳ ಭೇಟಿ, ಜನರ ಭಾಗವಹಿಸುವಿಕೆಯೊಂದಿಗೆ ಗ್ರಾಮೀಣ ಅಧ್ಯಯನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.