ಉಡುಪಿ: ಡಾ. ಎಸ್. ರಾಧಾಕೃಷ್ಣನ್ ಅವರು ಸೇರಿದಂತೆ ಹಿರಿಯ ಮಹಾನ್ ವ್ಯಕ್ತಿಗಳ ತತ್ವ ಆದರ್ಶಗಳನ್ನು ಪಾಲನೆ ಮಾಡುವುದರೊಂದಿಗೆ ಶಿಕ್ಷಕರು ಉತ್ತಮ ಕಾರ್ಯ ಸಾಧನೆಗಳನ್ನು ಮಾಡಿ, ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಬೆಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.
ಅವರು ಇಂದು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ ಉಡುಪಿ ಜಿಲ್ಲೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ತಾಲೂಕು ಹಾಗೂ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣಾ ಸಮಿತಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ, ಡಾ. ಎಸ್. ರಾಧಾಕೃಷ್ಣನ್ ಜನ್ಮ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಡಾ.ಎಸ್.ರಾದಾಕೃಷ್ಣನ್ ತಾಂತ್ರಿಕ ಕ್ಷೇತ್ರದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರು ಸೇರಿದಂತೆ ಮತ್ತಿತರ ಮಹಾನ್ ವ್ಯಕ್ತಿಗಳು ಅಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆಗಳು ಜೊತೆಯಲ್ಲಿ ಅನೇಕ ರೀತಿಯ ವಿರೋಧಗಳು ಇದ್ದರೂ ಸಹ ತಾಳ್ಮೆಯಿಂದ ಅವುಗಳನ್ನು ಗೆದ್ದು ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವುದರೊಂದಿಗೆ ಯಶಸ್ಸನ್ನು ಸಾಧಿಸಿದ್ದು, ಇದು ಎಲ್ಲಾ ಶಿಕ್ಷಕರು ಸ್ಪೂರ್ತಿದಾಯಕ ಎಂದರು.
ಪ್ರಶಸ್ತಿಗಳನ್ನು ಪಡೆಯುವುದು ವ್ಯಕ್ತಿಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ, ಇದಕ್ಕೆ ಪೂರಕವಾಗಿ ತಮ್ಮ ಕೆಲಸ ಕಾರ್ಯಗಳನ್ನು ಕೈಗೊಳ್ಳಬೇಕು ಅದರೊಂದಿಗೆ ಜನರ ಪ್ರೀತಿ ವಿಶ್ವಾಸಗಳನ್ನು ಗಳಿಸಿ ಸಮಾಜದಲ್ಲಿ ಮತ್ತಷ್ಟು ಸಾಧನೆಗಳನ್ನು ಮಾಡಬೇಕು ಎಂದರು.
ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಾಧ್ಯ , ಶಿಕ್ಷಕರು ಆದರ್ಶ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಭೋದಿಸುವುದರೊಂದಿಗೆ ಅವರುಗಳನ್ನು ಶಿಕ್ಷಣವಂತರನ್ನಾಗಿಸಿ ಉತ್ತಮ ಪ್ರಜೆಗಳಾಗಿ ರೂಪುಗೊಳಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ನೈತಿಕ ಶಿಕ್ಷಣವನ್ನು ನೀಡಿದಾಗ ಮಾತ್ರ ಅವರು ಮುಂದಿನ ದಿನಗಳಲ್ಲಿ ಪ್ರಜ್ಞಾವಂತ ನಾಗರೀಕನಾಗಲು ಸಾಧ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ನಿವೃತ್ತಿ ಹೊಂದುವುದು ಮಾತ್ರ ನಾವು ಕಾಣತ್ತಿದ್ದೇವೆ ಸರ್ಕಾರದಿಂದ ಹೊಸ ಶಿಕ್ಷಕರ ನೇಮಕಾತಿಯು ಅಷ್ಟೇ ಪ್ರಮಾಣದಲ್ಲಿ ಆಗದಿರುವುದು ಕಂಡು ಬರುತ್ತಿದೆ ಈ ಬಗ್ಗೆ ಗಮನ ಹರಿಸುವುದು ಅಗತ್ಯ ಎಂದ ಅವರ ನಿವೃತ್ತ ಶಿಕ್ಷಕರು ತಮ್ಮ ನಿವೃತ್ತಿಯ ನಂತರದ ದಿನಗಳಲ್ಲಿ ತಮ್ಮ ವಾಸಸ್ಥಳದ ಹತ್ತಿರವಿರುವ ಶಾಲೆಗಳನ್ನು ಬೋದನಾ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಕ್ರಿಯಾಶೀಲರಾಗಿರಬೇಕು ಎಂದರು.
ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯು ರಾಜ್ಯದಲ್ಲಿಯೇ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಿದ್ದರೂ, ಶಿಕ್ಷಕರು ಪ್ರಸ್ತುತ ದಿನಗಳಿಗೆ ಅನುಗುಣವಾಗಿ ಕಲಿಕಾ ವಿಧಾನದಲ್ಲಿ ಹೊಸತನದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವುದರೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತಂದು , ಇಡೀ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರನ್ನೂ ಸಹ ಸನ್ಮಾನಿಸಿ ಗೌರವಿಸಲಾಯಿತು. ಅಮೃತ ಭಾರತಿಗೆ ಕನ್ನಡದಾರತಿ ಪ್ರಬಂದ ಸ್ಪರ್ದೇಯಲ್ಲಿ ವಿಜೇತರಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪುನೀತ್ ನ್ಯಾನೋ ಉಪಗ್ರಹ ಯೋಜನೆಯಡಿ ಜಿಲ್ಲೆಯ ಪ್ರೌಢಶಾಲೆ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ವಿಜ್ಞಾನ ಸಂಬಂಧಿತ ಸ್ಪರ್ದೇಯಲ್ಲಿ ಭಾಗವಹಿಸುವ ಕುರಿತು ಮಾಹಿತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಡಿಡಿಪಿಐ ಶಿವರಾಜ್, ಡಯಟ್ ನ ಉಪ ನಿರ್ದೇಶಕ ಗೋವಿಂದ ಮಡಿವಾಳ, ಬಿಇಓ ಡಾ. ಅಶೋಕ್ ಕಾಮತ್, ಬಿ.ಟಿ.ನಾಯಕ್, ಚಂದ್ರಾನಾಯ್ಕ್ ಮತ್ತಿತರು ಉಪಸ್ಥಿತರಿದ್ದರು.