ಉಡುಪಿ: ದೇಶದ ರಕ್ಷಣೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದ್ದು, ದೇಶಸೇವೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಮನೆ ಮನೆಗಳಲ್ಲೂ ಕನಿಷ್ಠ ಒಬ್ಬರಾದರೂ ಸೈನಿಕ ಸೇವೆಗೆ ಸೇರ್ಪಡೆಗೊಳ್ಳುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಯತ್ ಉಡುಪಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ವತಿಯಿಂದ, ಕಿದಿಯೂರು ಹೋಟೆಲ್ ನ ಶೇಷಶಯನ ಹಾಲ್ ನಲ್ಲಿ ಆಯೋಜಿಸಿದ್ದ, ಉಡುಪಿಯ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಸರ್ಕಾರ ಯುವಜನರನ್ನು ರಕ್ಷಣಾ ಪಡೆಗಳಲ್ಲಿ ನಿಯೋಜಿಸಲು ಹೊಸ ಯೋಜನೆಯಾದ ಅಗ್ನಿಪಥ್ ನ್ನು ಜಾರಿಗೆ ತಂದಿದೆ ಇದಕ್ಕೆ ಪೂರಕವಾಗಿ ರಾಜ್ಯದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಲು ಪೂರ್ವ ತಯಾರಿ ಸೇನಾ ತರಬೇತಿ ಶಿಬಿರವನ್ನು ಹಿಂದುಳಿದ ವರ್ಗಗಳ ಇಲಾಖೆವತಿಯಿಂದ ಆಯೋಜಿಸುವುದು ಒಂದು ಉತ್ತಮ ಕಾರ್ಯವಾಗಿದೆ ಎಂದರು.
ದೇಶದ ರಕ್ಷಣಾ ಇಲಾಖೆಗೆ ಸೇರ್ಪಡೆಗೊಳ್ಳುವವರಿಗೆ ದೈಹಿಕ ಅರ್ಹತೆಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಗತ್ಯವಿದ್ದು, ರಾಜ್ಯದ ಯುವಕರನ್ನು ಸೈನಿಕ ಸೇವೆಗೆ ಅರ್ಹಗೊಳಿಸುವ ನಿಟ್ಟಿನಲ್ಲಿ ಇಡೀ ರಾಷ್ಟ್ರದಲ್ಲೇ ಪ್ರಥಮ ಬಾರಿಗೆ, ನುರಿತ ತರಬೇತುದಾರರ ಮೂಲಕ ಆಧುನಿಕ ತಂತ್ರಜ್ಞಾನಗಳೊಂದಿಗೆ ಸೈನಿಕರಾಗಲು ಬೇಕಾದ ಎಲ್ಲಾ ಅಗತ್ಯ ತರಬೇತಿ ನೀಡಿ ಅವರನ್ನು ದೇಶಸೇವೆಗೆ ನಿಯೋಜಿಸಲು ಉಡುಪಿಯಲ್ಲಿ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಆರಂಭಿಸಲಾಗಿದ್ದು, ಇಂತಹ ಶಾಲೆಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಆರಂಭಿಸುವ ಮೂಲಕ ಪ್ರತೀ ಮನೆಯಲ್ಲಿಯೂ ದೇಶಸೇವೆಗೆ ಸೈನಿಕರನ್ನು ತರಬೇತುಗೊಳಿಸಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದ ಯುವಕರಿಗೆ ಸೈನಿಕ ಪೂರ್ವ ತರಬೇತಿ ನೀಡಲು ಉಡುಪಿಯಲ್ಲಿ ಕೋಟಿ ಚೆನ್ನಯ್ಯ ತರಬೇತಿ ಶಾಲೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀರ ರಾಣಿ ಅಬ್ಬಕ್ಕ ಶಾಲೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಂಜಾ ನಾಯ್ಕ್ ಶಾಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ವೀರ ವ್ಯಕ್ತಿಗಳ ಹೆಸರಿನಲ್ಲಿ ಉಚಿತ ಊಟ ಮತ್ತು ವಸತಿಯೊಂದಿಗೆ ತರಬೇತಿ ಶಾಲೆಗಳನ್ನು ಆರಂಭಿಸಲಾಗುತ್ತಿದ್ದು, ಅಗ್ನಿವೀರರಾಗಿ ಸೇವೆ ಸಲ್ಲಿಸಿದ ರಾಜ್ಯದ ಯುವಕರಿಗೆ ರಾಜ್ಯದ ಸಕಾರಿ ಹುದ್ಧೆಗಳಲ್ಲಿ ಶೇ.50 ರಷ್ಟು ಮೀಸಲಾತಿ ನೀಡುವ ಚಿಂತನೆಯಿದ್ದು, ಮಹಿಳೆಯರಿಗೆ ಪ್ರತ್ಯೇಕ ತರಬೇತಿ ಶಾಲೆ ಆರಂಭಿಸುವ ಚಿಂತನೆ ಇದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಸೇನಾ ನೇಮಕಾತಿಯಲ್ಲಿ ಕಠಿಣ ಪರೀಕ್ಷೆಗಳನ್ನು ನಡೆಸುವುದರೊಂದಿಗೆ ಆಯ್ಕೆಗಳನ್ನು ಮಾಡಲಾಗುವುದು. ಇವುಗಳಲ್ಲಿ ಯಾವುದೇ ರೀತಿಯ ಮೀಸಲಾತಿಗಳು ಇರುವುದಿಲ್ಲ ಅರ್ಹತೆಯೊಂದೇ ಮಾನದಂಡವಾಗಿರುತ್ತದೆ ಇದಕ್ಕಾಗಿ ಇಂತಹ ತರಬೇತಿಗಳು ಅತ್ಯಗತ್ಯವಾಗಿವೆ, ತರಬೇತಿಯು ನೇಮಕಾತಿ ಸಂದರ್ಭದಲ್ಲಿ ಯುವ ಜನರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂದರು.
ಸಸಿಹಿತ್ಲು ರಂಗ ಸಂದರ್ಶನದ ಪರಮಾನಂದ ವಿ ಸಾಲಿಯಾನ್ ಮತ್ತು ಬಳಗದವರಿಂದ ಕೋಟಿ ಚೆನ್ನಯ್ಯ ಗೀತ ನಾಟಕ ನಡೆಯಿತು. ಸೇನಾ ಶಿಬಿರಕ್ಕೆ ಆಯ್ಕೆಯದ ಶಿಕ್ಷಣಾರ್ಥಿಗಳಿಗೆ ಅರ್ಹತಾ ಪತ್ರವನ್ನು ಹಾಗೂ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್ ಕಲ್ಮಾಡಿ, ಹಿಂದುಳಿದ ವರ್ಗಗಳ ಇಲಾಖೆಯ ಪ್ರದಾನ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಮತ್ತಿತರರು ಉಪಸ್ಥಿತರಿದ್ದರು.