ಮಲ್ಪೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ ರಕ್ಷಕ ಶಿಕ್ಷಕ ಸಮಾವೇಶ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎ.ವಿ. ಬಾಳಿಗಾ ಆಸ್ಪತ್ರೆ ದೊಡ್ಡಣಗುಡ್ಡೆ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಇವರು ಪೋಷಕರನ್ನು ಉದ್ದೇಶಿಸಿ ಮಾತನಾಡುತ್ತಾ, ಪೋಷಕರು ಮಕ್ಕಳ ಪ್ರವೇಶಾತಿಗೆ ಸೀಮಿತವಾಗಿ ಕಾಲೇಜಿನ ಸಂಪರ್ಕವನ್ನು ಉಳಿಸಿಕೊಳ್ಳುತ್ತಿದ್ದು ಜೀವನದ ಸ್ಪಷ್ಟ ದಿಕ್ಕನ್ನು ಗುರುತಿಸಿಕೊಳ್ಳಲಾಗದ ವಯಸ್ಸಿನಲ್ಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಕರ ಮಾರ್ಗದರ್ಶನ ಎಲ್ಲವನ್ನೂ ನೀಡುವುದಿಲ್ಲ.
ಮೊಬೈಲ್, ಕಂಪ್ಯೂಟರ್, ವಾಹನ, ಸಹಪಾಠಿಗಳು, ಇಂತಹ ಪರಿಸರಗಳ ಮಧ್ಯದಲ್ಲಿ ವಿದ್ಯಾರ್ಥಿಗಳ ಗುರಿ ಮಂಕಾಗುವ ಸಾಧ್ಯತೆಗಳೇ ಹೆಚ್ಚಾಗಿದ್ದು, ಪೋಷಕರು ಮಕ್ಕಳನ್ನು ಗೆಳೆಯರಂತೆ ಕಂಡು ಅಕ್ಕರೆ ತೋರಿ, ವಿಚಾರಿಸಿ ಮನೆಯಲ್ಲಿಯೂ ಉತ್ತಮ ವಾತಾವರಣವನ್ನು ನೀಡಿ ಮನಸ್ಸು ಹಾಗೂ ದೈಹಿಕವಾಗಿ ಸರಿದಾರಿಯಲ್ಲಿ ನಡೆಯುವಂತೆ ಮಾಡಿದಲ್ಲಿ, ಉತ್ತಮ ಜನಾಂಗವನ್ನು ನಿರೀಕ್ಷಿಸಬಹುದು ಎಂದರು.
ಎಂ.ಜಿ.ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಸಲಹಾ ಸಮಿತಿಯ ಸದಸ್ಯರೂ ಆದ ಪ್ರೊ. ಎಂ.ಎಲ್. ಸಾಮಗ ಉದ್ಘಾಟಿಸಿ ಶುಭ ಹಾರೈಸಿದರು. ಪ್ರಾಂಶುಪಾಲ ಡಾ. ಸುರೇಶ್ ರೈ ಕೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಐ.ಕ್ಯೂ.ಎ.ಸಿ. ಸಂಚಾಲಕ ಡಾ. ಮೇವಿ ಮಿರಾಂದ, 2021- 22ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಕೆ. ಶಿವಾನಂದ ವೈದ್ಯ, ಉಪಸ್ಥಿತರಿದ್ದರು. 2022-23ನೇ ಸಾಲಿಗೆ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸುಜಾತ, ಉಪಾಧ್ಯಕ್ಷರಾಗಿ ಕಮಲಾಕ್ಷ ಶೇಟ್, ಜಂಟಿ ಕಾರ್ಯದರ್ಶಿಯಾಗಿ ಶಾಲಿನಿ ಆಯ್ಕೆಯಾದರು.
ಶಿಕ್ಷಕ-ರಕ್ಷಕ ಸಂಘದ ಸಂಚಾಲಕ ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ಸುಷ್ಮಾ ಟಿ. ಪ್ರಾರ್ಥಿಸಿದರು. ಶಿಕ್ಷಕ-ರಕ್ಷಕ ಸಂಘದ ಸಂಚಾಲಕ ಡಾ. ಉದಯ ಶೆಟ್ಟಿ ಕೆ. ನಿರೂಪಿಸಿದರು. ಉಮೇಶ್ ಪೈ ವಂದಿಸಿದರು.