ಉಡುಪಿ: 2022ರ ಮಕ್ಕಳ ಹಕ್ಕುಗಳ ಮಾಸೋತ್ಸವದ ಪೂರ್ವಭಾವಿ ಸಭೆಯು ಶುಕ್ರವಾರ ಪಡಿ ಸಭಾಂಗಣದಲ್ಲಿ ನಡೆಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ಸಹ ಸಂಚಾಲಕ ರೆನ್ನಿ ಡಿಸೋಜ, ಮಕ್ಕಳ ಹಕ್ಕುಗಳ ಮಾಸೋತ್ಸವ ಕಾರ್ಯಕ್ರಮವು ವಿವಿಧ ನಾಗರಿಕ ಸಂಘಟನೆಗಳು ಒಟ್ಟು ಸೇರಿ ಆಯೋಜಿಸುವ ಕಾರ್ಯಕ್ರಮ ಆಗಿದ್ದು, ಒಂದು ತಿಂಗಳಾದ್ಯಾಂತ ಹಮ್ಮಿಕೊಳ್ಳುವ ಕಾರ್ಯಕ್ರಮದ ವಿವರವನ್ನು ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ 2002 ರಿಂದ ವೆಲೊರೆಡ್ ಪರಿಕಲ್ಪನೆಯಲ್ಲಿ, ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ, ಪಡಿ ಮಂಗಳೂರು ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರಗಳು, ವಿವಿಧ ಇಲಾಖೆಗಳು, ಸ್ವಯಂಸೇವಾ ಸಂಸ್ಥೆಗಳು, ನಾಗರಿಕ ಸಂಘಟನೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಎಸ್.ಡಿ.ಎಮ್,ಸಿ ಸಂಘಟನೆಗಳು ಇವರೆಲ್ಲರ ಸಹಕಾರ ಮತ್ತು ಸಹಭಾಗಿತ್ವದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವನ್ನು ನಡೆಸುತ್ತಾ ಬಂದಿರುತ್ತದೆ.
ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಹಲವಾರು ಬೇಡಿಕೆ ಮತ್ತು ಬದಲಾವಣೆಗೆ ಬೇಕಾದ ಸಲಹೆಗಳನ್ನು ಸರಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಲಾಗಿದೆ. ಕೋವಿಡ್ ನಿಂದಾಗಿ ಮಕ್ಕಳು ಅನೇಕ ಹೊಸಹೊಸ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ದ.ಕ ಜಿಲ್ಲೆಯಲ್ಲಿ ಭಿಕ್ಷಾಟನೆ, ಬಾಲಕಾರ್ಮಿಕತೆ, ಮಕ್ಕಳ ಮಾರಾಟ ಸಾಗಾಟ, ಅಂತರ್ಜಾಲ ಸುರಕ್ಷತೆ, ಶಿಕ್ಷಣ ವಂಚಿತ ಮಕ್ಕಳು, ವಲಸೆ ಮಕ್ಕಳು, ಅಪ್ರಾಪ್ತ ವಯಸ್ಸಿನಲ್ಲಿ ಮಕ್ಕಳ ಮೇಲಾಗುತ್ತಿರುವ ಅತ್ಯಾಚಾರ, ಲೈಂಗಿಕ ಮತ್ತು ದೈಹಿಕ ಕಿರುಕುಳ, ಇತ್ಯಾದಿಗಳು ನಡಯುತ್ತಲೇ ಇದೆ. ಇದಕ್ಕಾಗಿ ಸಮಾನ ಮನಸ್ಕರಾದ ನಾವು ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವಲ್ಲಿ ಧ್ವನಿಯಾಗಿ ನಿಲ್ಲಬೇಕಿದೆ ಎಂದು ಹೇಳಿದರು.
ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ (ರಿ.) ದ.ಕ. ಅಧ್ಯಕ್ಷರಾದ ನಯನ ರೈ, ದ.ಕ. ಬಾಲ ನ್ಯಾಯ ಮಂಡಳಿ ಸದಸ್ಯರಾದ ಗೌರಿ, ದ.ಕ ಜಿಲ್ಲೆ ಮಕ್ಕಳ ರಕ್ಷಣಾಧಿಕಾರಿ ಕುಮಾರ್, ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ವನಜಾಕ್ಷಿ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ ಜಿಲ್ಲೆ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಪ್ರತಿನಿಧಿಗಳು, ಮಕ್ಕಳಿಗೆ ಸಂಬಂಧಪಟ್ಟ ಇಲಾಖೆಯ ಪ್ರತಿನಿಧಿಗಳು, ಚೈಲ್ಡ್ ಲೈನ್ ನೋಡಲ್ ಮತ್ತು ಚೈಲ್ಡ್ ಲೈನ್ ಸಂಸ್ಥೆ-೧೦೯೮ ಸಿಬ್ಬಂದಿ ವರ್ಗದವರು, ಪಡಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಮತ್ತು ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಕಾಲತ್ತು ಸಂಯೋಜಕ ಸಿದ್ದಾಂತ್ ಕಾರ್ಯಕ್ರಮದ ನಿರೂಪಿಸಿದರು. ಪಡಿ ಮಂಗಳೂರು ಜಿಲ್ಲಾ ಸಂಯೋಜಕರಾದ ಗ್ಲೀಷಾ ವಂದಿಸಿದರು.