ಮಂಗಳೂರು: ಉಡುಪಿ ಪರ್ಯಾಯ ಪೀಠವನ್ನೇರಲಿರುವ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಪೌರ ಸನ್ಮಾನ ನಗರದ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಧ್ಯಾನ ಮಂದಿರದಲ್ಲಿ ನಡೆಯಿತು.
ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಪೌರ ಸನ್ಮಾನ ನೆರವೇರಿಸಿ ಮಾತನಾಡಿ, ಪ್ರತಿ ಬಾರಿ ಉಡುಪಿ ಪರ್ಯಾಯ ಪೀಠವನ್ನೇರುವ ಶ್ರೀಗಳಿಗೆ ಮಂಗಳೂರಿನಲ್ಲಿ ಪೌರ ಸನ್ಮಾನ ನೆರವೇರಿಸುತ್ತಿರುವುದು ನಮ್ಮ ಸೌಭಾಗ್ಯ. ಪರ್ಯಾಯ ಹಾಗೂ ಎಲ್ಲಾ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನೆರವೇರಲಿ ಎಂದರು.
ಶಾಸಕ ಡಿ. ವೇದವ್ಯಾಸ್ ಕಾಮತ್ ಮಾತನಾಡಿ, ಕೃಷ್ಣಾಪುರ ಶ್ರೀಗಳ ಪರ್ಯಾಯದ ಅವಧಿಯಲ್ಲಿ ನಾನಾ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದರ ಮೂಲಕ ಎರಡು ವರ್ಷದ ಪರ್ಯಾಯ ಅವಧಿ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಅಭಿನಂದನಾ ನುಡಿಗಳನ್ನಾಡಿ, ಕೃಷ್ಣಾಪುರ ಶ್ರೀಗಳು ಯಾವುದೇ ಪ್ರಚಾರ, ಪ್ರಸಿದ್ದಿಯನ್ನು ಬಯಸದೆ ಶಾಸ್ತ್ರ ಅಧ್ಯಯನ, ಪೂಜೆ, ತಪಸ್ಸು ಮುಂತಾದವುಗಳನ್ನು ಮಾಡಿಕೊಂಡೇ ಸಮಯ ಕಳೆಯುತ್ತಿದ್ದಾರೆ.
ವಿದ್ಯಾಸಂಸ್ಥೆಯನ್ನೂ ನಡೆಸಿ, ವಿದ್ಯಾರ್ಥಿಗಳಿಗೆ ಬೇಕಾದ ತರಬೇತಿಯನ್ನೂ ನೀಡುತ್ತಿದ್ದಾರೆ. ಮಠದಲ್ಲಿ ವೇದಾಧ್ಯಯನ ಮಾಡುವವರಿಗಾಗಿ ಬೇಕಾದ ಸಕಲ ವ್ಯವಸ್ಥೆಯನ್ನೂ ಅವರು ಮಾಡುತ್ತಿದ್ದಾರೆ. ಅವರ ಎರಡು ವರ್ಷದ ಪರ್ಯಾಯದ ಅವಧಿಯಲ್ಲಿ ಭಾರತದ ಶ್ರೇಯೋಭಿವೃದ್ಧಿಗೆ ಶೀಕೃಷ್ಣನ ಪೂಜಾ ಕೈಂಕರ್ಯ ಮಾಡುತ್ತಾ ವಿಶೇಷವಾಗಿ ಪ್ರಾರ್ಥಿಸಿ, ಇದರಿಂದ ಭಗವಂತ ಸಂತುಷ್ಟನಾಗಿ ಇಡೀ ನಾಡಿಗೆ ಮಂಗಳವನ್ನುಂಟು ಮಾಡಲಿ ಎಂದು ಶುಭ ಹಾರೈಸಿದರು.
ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಶರವು ರಾಘವೇಂದ್ರ ಶಾಸ್ತ್ರಿ, ಉಪ ಮೇಯರ್ ಸುಮಂಗಲಾ ರಾವ್, ಕಾರ್ಪೊರೇಟರ್‌ಗಳಾದ ಶಶಿಧರ್ ಹೆಗ್ಡೆ, ಪೂರ್ಣಿಮಾ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಂದ ಹೆಗ್ಡೆ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಕದ್ರಿ ನವನೀತ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮ ಸಂಘಟಕ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ದಯಾನಂದ ಕಟೀಲು ನಿರ್ವಹಿಸಿದರು.