ಮಂಗಳೂರು, ಮೇ 2: ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದೈತ್ಯ ಪ್ರತಿಭೆ, ಪಂಡಿತ್ ಭೀಮಸೇನ ಜೋಷಿ ಅವರ ಶಿಷ್ಯ, ಅಸಂಖ್ಯಾತ ಪ್ರಶಸ್ತಿಗಳಿಗೆ ಭಾಜನರಾಗಿರುವ ಪಂಡಿತ್ ಉಪೇಂದ್ರ ಭಟ್ ಅವರ 75 ನೇ ವರ್ಷದ ಜನ್ಮದಿನದ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಯೂತ್ ಆಫ್ ಜಿಎಸ್ ಬಿ ವಾಹಿನಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮೇ 4, ಶನಿವಾರ ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ಸಂಜೆ 5.30 ರಿಂದ ಪಂಚ ಸಪ್ತಥಿ ಕಾರ್ಯಕ್ರಮ ನಡೆಯಲಿದೆ. ಖ್ಯಾತ ವಾಯಲಿನ್ ವಾದಕರಾದ ತೋನ್ಸೆ ರಂಗ ಪೈ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ತಮ್ಮ ಕಂಠಸ್ವರದಿಂದಲೇ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಪಂಡಿತ್ ಉಪೇಂದ್ರ ಭಟ್ ಅವರು ತಮ್ಮ ಜನಪ್ರಿಯ ಗೀತೆಗಳನ್ನು ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಾಡಿನ ಗಣ್ಯರು ಅವರನ್ನು ಸನ್ಮಾನಿಸಿ ಅವರು ಸಂಗೀತ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಸ್ಮರಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಸೆಂಚುರಿ ಬಿಲ್ಡರ್ಸ್ ನ ದಯಾನಂದ ಪೈ, ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಎಕ್ಸಪರ್ಟ್ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ನರೇಂದ್ರ ನಾಯಕ್, ಹಾಂಗ್ಯೋ ಐಸ್ ಕ್ರೀಂನ ಪ್ರದೀಪ್ ಪೈ, ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಸಿಎ ಜಗನ್ನಾಥ್ ಕಾಮತ್, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಕಾರ್ಯದರ್ಶಿ ರಂಗನಾಥ್ ಭಟ್ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.