ವಿದ್ಯಾಗಿರಿ, ಮಾ.6: ದೇಶದ ಅಭಿವೃದ್ಧಿಗೆ ಮಹಿಳೆಯರ ಸಶಕ್ತೀಕರಣ, ಮೌಲ್ಯ ಹಾಗೂ ಗೌರವವು ಅವಶ್ಯವಾಗಿದ್ದು, ಈ ಜವಾಬ್ದಾರಿಯನ್ನು ಪುರುಷರೂ ಅರಿತುಕೊಳ್ಳಬೇಕಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ. ಹೇಳಿದರು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ -2024ರ ಪ್ರಯುಕ್ತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿವಿಧ ಸಂಘ -ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ‘ಸಾಧನೆಗಳ ಆಚರಣೆ ಭವಿಷ್ಯದ ಪ್ರೇರಣೆ ಮಹಿಳಾ ಉದ್ಯಮಶೀಲತಾ ಪ್ರೇರಣಾ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ವಿವಿಧ ಕಾರ್ಯಗಳಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ ಕಡಿಮೆ ಇದೆ. ಮಹಿಳೆಯರಿಗೆ ರಾಜಕೀಯವಾಗಿ ಶೇ ೫೦ ರಷ್ಟು ಮೀಸಲಾತಿ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಎಂಬುದು ವಿಶ್ವ ಪರಿಕಲ್ಪನೆ ಎಂದರು. ಮಹಿಳೆಯರ ಆಶಯ ಪರಿಗಣಿಸದೇ ಯಾವುದೇ ಪ್ರಗತಿ ಸಾಧ್ಯವಿಲ್ಲ. ಮಹಿಳೆಯರಿಗೆ ಸ್ಪಂದನೆ ಮತ್ತು ಅವಕಾಶ ನೀಡುವುದು ಮುಖ್ಯ ಎಂದರು.
ಸ್ವಸಹಾಯ ಸಂಘಗಳ ಮೂಲಕ ತಳಮಟ್ಟದಲ್ಲಿ ಮಹಿಳಾ ಅಭಿವೃದ್ಧಿ ಸಾಧಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಚಾಲಕರಾಗಿದ್ದಾರೆ. ಅದು ಕೇವಲ ವಾಹನದ ಚಲಾವಣೆ ಮಾತ್ರವಲ್ಲ, ಸಾಮಾಜಿಕ ಸಶಕ್ತೀಕರಣ ಎಂದು ವಿಶ್ಲೇಷಿಸಿದರು. ದಕ್ಷಿಣ ಕನ್ನಡ (ಗ್ರಾಮೀಣ) ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ಕೆ. ಕಾರಿಗಿ ಮಾತನಾಡಿ, ಮಹಿಳೆಯರಿಗೆ ಆತ್ಮವಿಶ್ವಾಸ ಹಾಗೂ ಆರೋಗ್ಯ ಬಹುಮುಖ್ಯ ಎಂದರು. ಮಹಿಳೆ ಮೇಲಿನ ಕೌಟುಂಬಿಕ ದೌರ್ಜನ್ಯಗಳಿಗೆ ತಡೆ, ಅನೈತಿಕ ಸಾಗಾಣಿಕೆಗೆ ಕಡಿವಾಣ ಹಾಕಬೇಕಾಗಿದೆ ಎಂದರು. ಗಂಡು- ಹೆಣ್ಣು ಲಿಂಗಾನುಪಾತ ಸಾವಿರಕ್ಕೆ ೯೪೧ರಷ್ಟಿದೆ. ಮಹಿಳಾ ಸಶಕ್ತೀಕರಣ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳಿಗೆ ಸಾಲ, ಉದ್ಯೋಗಿನಿ ನೆರವು, ಕೌಶಲಾಭಿವೃದ್ಧಿ ಕಾರ್ಯಕ್ರಮವನ್ನು ಸರ್ಕಾರ ಮಾಡುತ್ತಿದೆ. ಮಹಿಳೆಯರು ಪರಸ್ಪರ ಗೌರವಿಸುವ, ಉತ್ತೇಜಿಸುವ ಕಾರ್ಯ ಆಗಬೇಕು. ಹೆಣ್ಣು ಸ್ವಂತ ತೀರ್ಮಾನ ಕೈಗೊಳ್ಳುವಂತಾಗಬೇಕು ಎಂದ ಅವರು, ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಮಹಿಳಾಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿವೆ ಎಂದು ಶ್ಲಾಘಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ 2,527 ಮಹಿಳಾ ಉದ್ಯೋಗಿಗಳಿದ್ದರೆ, 2,052 ಪುರುಷ ಉದ್ಯೋಗಿಗಳು. ವಿದ್ಯಾರ್ಥಿಗಳ ಪೈಕಿ ಶೇ.60 ರಷ್ಟು ಹೆಣ್ಣು ಮಕ್ಕಳು ಎಂದರು. ಮಹಿಳೆಯರ ಘನತೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳನ್ನು ನೋಡಿದಾಗ ಬೇಸರ ಎನಿಸುತ್ತದೆ. ಮಹಿಳೆಯ ವಸ್ತ್ರ, ಕೆಲಸದ ಅವಧಿ, ಕೆಲಸ ಕಾರ್ಯವನ್ನು ನಿರ್ದೇಶಿಸುವಂತೆ ಪ್ರತಿಕ್ರಿಯಿಸುತ್ತಾರೆ. ಆಕೆಯ ಸ್ವಾತಂತ್ರ್ಯ, ಸ್ವಾಭಿಮಾನಕ್ಕೆ ಬೆಲೆ ನೀಡುತ್ತಿಲ್ಲ. ಮಹಿಳೆಯರ ಕುರಿತು ಎಲ್ಲರಲ್ಲೂ ಸೂಕ್ಷ್ಮತೆ ಬರಬೇಕಾಗಿದೆ ಎಂದರು. ಮಹಿಳಾ ಸಶಕ್ತೀಕರಣ ಕುರಿತು ವರ್ಷಪೂರ್ತಿ ಕಾರ್ಯಕ್ರಮ ನಡೆಸಲು ಆಳ್ವಾಸ್ ಬದ್ಧವಾಗಿದೆ. ಮಹಿಳಾ ಸಶಕ್ತೀಕರಣದ ವೇದಿಕೆಗಳನ್ನು ಹೆಚ್ಚಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಮಹಿಳೆಯರ ಅಸ್ತಿತ್ವಕ್ಕೆ ಇನ್ನೊಂದು ಆಧಾರ ಅಗತ್ಯ ಎಂದು ಸಮಾಜ ಪರಿಭಾವಿಸಿದೆ. ಮಹಿಳೆಯರ ಪಾತ್ರ ನಿರ್ದೇಶಿಸುವವರು ಇತರರು ಎನ್ನುವಂತೆ ಸಮಾಜ ನಡೆದುಕೊಳ್ಳುತ್ತಿರುವುದು ಬೇಸರದ ವಿಷಯ ಎಂದರು. ಕಳೆದ 8 ವರ್ಷಗಳಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಇಳಿಕೆಯಾಗುತ್ತಿದೆ. ಮಹಿಳಾ ದೌರ್ಜನ್ಯಗಳೂ ಹೆಚ್ಚಿವೆ. ಮಹಿಳೆಯರನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಾಗಿದೆ ಎಂದರು. ಮಹಿಳೆಯರು ಕಾರ್ಮಿಕರಾಗಿದ್ದಾರೆ. ಆದರೆ, ಒಡೆತನ ಪಡೆದಿಲ್ಲ. ಈ ಸಮಾವೇಶದ ಮೂಲಕ ಮಹಿಳೆ ಆರ್ಥಿಕ ಸಶಕ್ತಳಾಗಬೇಕು. ಮಹಿಳೆಯರ ಸ್ವತಂತ್ರ ಅಸ್ತಿತ್ವ ಹೊಂದಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮೂಡುಬಿದಿರೆ ತಾಲ್ಲೂಕು ಘಟಕದ ಕಾರ್ಯದರ್ಶಿ ಪ್ರೇಮ ಕಲ್ಲಬೆಟ್ಟು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುನಿತಾ ನಾಯಕ್ ಹಾಗೂ ಬಂಟರ ಸಂಘದ ಮೂಡುಬಿದಿರೆ ಘಟಕದ ಅಧ್ಯಕ್ಷೆ ಶೋಭಾ ಶಿವಪ್ರಸಾದ್ ಹೆಗ್ಡೆ ಇದ್ದರು. ವಿದ್ಯಾರ್ಥಿ ಅಬ್ದುಲ್ ರೆಹಮಾನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ದೀಕ್ಷಾ ಸ್ವಾಗತಿಸಿ, ಸುರಕ್ಷಾ ವಂದಿಸಿದರು. ಮಂಗಳೂರು ರೋಶನಿ ನಿಲಯ ಸಮಾಜಕಾರ್ಯ ಕಾಲೇಜಿನ ಪರೀಕ್ಷಾಂಗ ಕುಲಸಚಿವರಾದ ಪ್ರೊ. ವಿನೀತಾ ರೈ ಕೆ. ಅವರು ‘ಮಹಿಳಾ ಉದ್ಯಮಶೀಲತೆ- ಸಾಧನೆ ಮತ್ತು ಪ್ರೇರಣೆ’ ಹಾಗೂ ಮಣಿಪಾಲ ಮಾಹೆಯ ಆಪ್ತ ಸಮಾಲೋಚಕ ಡಾ. ರಾಯನ್ ಸಿ. ಮಥಾಯಸ್ ‘ಮಹಿಳೆ ಮತ್ತು ಮಾನಸಿಕ ಆರೋಗ್ಯ – ಜೀವನ ಪ್ರೀತಿ ಮತ್ತು ಪ್ರೇರಣೆ’ ಕುರಿತು ಉಪನ್ಯಾಸ ನೀಡಿದರು. ಪ್ರಾಧ್ಯಾಪಕಿ ಡಾ. ಮಧುಮಾಲಾ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. ಸಮಾವೇಶದ ಅಂಗವಾಗಿ ಮಹಿಳೆಯರು ತಯಾರಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಹಾಗೂ ಆಳ್ವಾಸ್ ಕಾಲೇಜಿನ ಗ್ರಂಥಾಲಯವು ಏರ್ಪಡಿಸಿದ ಲೇಖಕಿಯರ ಹಾಗೂ ಸಾಧಕಿಯರ ಪುಸ್ತಕ ಪ್ರದರ್ಶನ ಗಮನ ಸೆಳೆಯಿತು.