ವಿದ್ಯಾಗಿರಿ (ಮೂಡುಬಿದಿರೆ), ಡಿ.15: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ದೇಶ, ಧರ್ಮ, ಸಂಸ್ಕೃತಿಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಶ್ಲಾಘಿಸಿದರು. ಅವರು ಗುರುವಾರ ಸಂಜೆ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, ೨೯ನೇ ವಿರಾಸತ್ ಉದ್ಘಾಟಿಸಿ ಅವರು ಮಾತನಾಡಿದರು. ವಿರಾಸತ್ ಉದ್ಘಾಟನೆ ಬಹಳ ಖುಷಿ ನೀಡಿದೆ. ಸಂಸ್ಕಾರಯುತ ಶಿಕ್ಷಣ ನೀಡುವುದು ಆಳ್ವಾಸ್ಶ್ರೇಯ. ಸಾಂಸ್ಕೃತಿಕ ಶಿಕ್ಷಣವು ವ್ಯಕ್ತಿತ್ವ ವಿಕಸನಕ್ಕೆ ಸ್ಫೂರ್ತಿ ಯಾಗಿದೆ. ಸಂಗೀತ ಹಾಗೂ ಕಲೆ ಎಲ್ಲರಗೂ ಖುಷಿ ನೀಡುತ್ತದೆ ಎಂದು ಅವರು ಅಭಿನಂದಿಸಿದರು. ಆಳ್ವಾಸ್ ಕನ್ನಡ ಮಾಧ್ಯಮ ಶಾಲಾ ಶಿಕ್ಷಣವನ್ನು ಶ್ಲಾಘಿಸಿದ ಅವರು, ಇದನ್ನು ಸರ್ವಶ್ರೇಷ್ಠ ಶಾಲೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಜಗತ್ತಿನ ಪ್ರಮುಖ ಐದು ಅಭಿವೃದ್ಧಿಶೀಲ ರಾಷ್ಟ್ರಗಳು ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿವೆ. ಆಳ್ವಾಸ್ ಮಾತೃಭಾಷೆ ವೃದ್ಧಿಗೆ ಇನ್ನಷ್ಟು ಕೊಡುಗೆ ನೀಡಲಿ ಎಂದು ಹಾರೈಸಿದರು.
ಮೂರೂವರೆ ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಕ್ರೀಡಾ ತರಬೇತಿ ಮೂಲಕ ಆಳ್ವಾಸ್ ದೇಶದ ಕೀರ್ತಿ ಎತ್ತಿ ಹಿಡಿದಿದೆ. ಇಂತಹ ಪ್ರಯತ್ನಗಳಿಂದ ಒಲಿಂಪಿಕ್ ನಂತಹ ಕ್ರೀಡೆಯಲ್ಲಿ ಭಾರತ ಯಶಸ್ಸು ಸಾಧಿಸುತ್ತಿದೆ ಎಂದರು. ಉತ್ಕೃಷ್ಟ ವ್ಯಕ್ತಿತ್ವ ರೂಪಿಸುವ, ಸರ್ವರ ಸುಖ ಹಾಗೂ ಸ್ವಾಸ್ಥ್ಯ ಕ್ಕೆ ಕಾರ್ಯಕ್ರಮ ಆಯೋಜಿಸುವ ಆಳ್ವಾಸ್‌ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ವಿರಾಸತ್ ಜ್ಞಾನ ಜಾತ್ರೆ. ಇಲ್ಲಿ ವಿಜ್ಞಾನ ಹಾಗೂ ಜ್ಞಾನವನ್ನು ನೀಡಲಾಗುತ್ತಿದೆ. ಮೋಹನ ಆಳ್ವ ಜ್ಞಾನದ ಮಹಾಯಾಗ ಮಾಡುತ್ತಿದ್ದಾರೆ ಎಂದರು. ಬಡ ರಾಷ್ಟ್ರ ಆಗಿದ್ದ ಭಾರತ ಇಂದು ಹಿಂದಿಯ ‘ಬಡಾ’ (ದೊಡ್ಡ) ರಾಷ್ಟ್ರವಾಗಿ ಬೆಳೆಯುತ್ತಿದೆ. ಡಾ.ಎಂ.ಮೋಹನ ಆಳ್ವ ಅವರಂತಹ ಸಾಂಸ್ಕೃತಿಕ ನಾಯಕರಿಂದ ಇದು ಸಾಧ್ಯವಾಗಿದೆ ಎಂದರು. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರ ದೊರೆಯುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಅದೃಷ್ಟವಂತರು. ಆಳ್ವರ ಕಾರ್ಯಕ್ಕೆ ಸಹಸ್ರ ಬಾಹುಗಳ ಶಕ್ತಿಯನ್ನು ನಾವೆಲ್ಲ ನೀಡುತ್ತೇವೆ ಎಂದು ಭರವಸೆ ನೀಡಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಶಿಸ್ತು ಶ್ಲಾಘನೀಯ ಎಂದು ಮನದುಂಬಿ ಹಾರೈಸಿದರು.
ಅತಿಥಿಗಳನ್ನು ಸ್ವಾಗತಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಹುತಾತ್ಮ ಯೋಧ ಪ್ರಾಂಜಲ್ ಹಾಗೂ ಆಳ್ವಾಸ್ ಸಂಸ್ಥೆಯ ಸಂಬಂಧವನ್ನು ಸ್ಮರಿಸಿ ಭಾವುಕರಾದರು. ಮೂಲ್ಕಿ-ಮೂಡುಬಿದಿರೆಯ ವಿಧಾನಸಭಾ ಕ್ಷೇತ್ರ ಶಾಸಕ ಉಮಾನಾಥ ಎ. ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯ ಆಯುಕ್ತ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ, ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಿ. ಶಂಕರ್, ಆದಾನಿ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಬರೋಡಾದ ಉದ್ಯಮಿಗಳಾದ ಬರೋಡಾದ ಶಶಿಧರ ಶೆಟ್ಟಿ, ಬೆಂಗಳೂರಿನ ಪ್ರಸನ್ನ ಶೆಟ್ಟಿ, ಮಂಗಳೂರಿನ ರವೀಂದ್ರನಾಥ ಆಳ್ವ, ಬಂಟ್ವಾಳದ ರವಿಶಂಕರ್ ಶೆಟ್ಟಿ, ಮೂಡುಬಿದಿರೆಯ ಕೆ.ಶ್ರೀಪತಿ ಭಟ್, ಮುಸ್ತಫಾ ಎಸ್.ಎಂ, ಪ್ರವೀಣ್ ಕುಮಾರ್, ಪ್ರಮುಖರಾದ ಮೂಡುಬಿದಿರೆಯ ಜಯಶ್ರೀ ಅಮರನಾಥ ಶೆಟ್ಟಿ, ಶ್ರದ್ಧಾ ಹೆಗ್ಗಡೆ, ಸುರೇಂದ್ರ ಹೆಗ್ಗಡೆ, ಮೋಹನ್ ದೇವ ಆಳ್ವ, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಇಸ್ಕಾನ್ ನ ನಾಮ ಭಕ್ತಿದಾಸ್ ಮತ್ತು ಪ್ರೇಮ ಭಕ್ತಿ ದಾಸ್, ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಇದ್ದರು.
ಅನ್ವೇಷಣಾತ್ಮಕ ರೈತ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಅವರ ಅಂಚೆ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಆರಂಭದಲ್ಲಿ ಹರ್ಷ ರೆಡ್ಡಿ ನೇತೃತ್ವದ ಎನ್ ಸಿಸಿ ಪಡೆ ರಾಜ್ಯಪಾಲರಿಗೆ ಗೌರವ ವಂದನೆ ಸಲ್ಲಿಸಿತು. ಬಳಿಕ ರಾಜ್ಯಪಾಲರು ಆಳ್ವಾಸ್ ವಿರಾಸತ್ ಧ್ವಜಾರೋಹಣ ಮಾಡಿದರು. ರಾಜೇಶ್ ಹಾಗೂ ಕೆ. ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 29 ನೇ ವಿರಾಸತ್‌ನ ವಿಶೇಷವಾಗಿ ಸಾಂಸ್ಕೃತಿಕ ರಥವು ವೇದಘೋಷಗಳ ನಿನಾದ, ಭಜನೆಗಳು, ಪುಷ್ಪ ಪಲ್ಲಕ್ಕಿಗಳು, ಪ್ರೇಕ್ಷಕರ ಜಯ ಘೋಷ ಹಾಗೂ ಮಂಗಳವಾದ್ಯಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ಲೋಕ ಮಾರ್ಗದರ್ಶಕರಾದ ರಾಮ- ಕೃಷ್ಣರ ಮೂರ್ತಿ ಪ್ರತಿಷ್ಠಾಪಿಸಿದ ಸಾಂಸ್ಕೃತಿಕ ರಥವನ್ನು ಮುಖ್ಯ ವೇದಿಕೆಯ ಮುಂಭಾಗದಲ್ಲಿ ಬಲದಿಂದ ಎಡಕ್ಕೆ ಎಳೆಯಲಾಯಿತು. ಇದಕ್ಕೂ ಮೊದಲು ಪಲ್ಲಕ್ಕಿಯಲ್ಲಿ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ಧ್ಯೋತಕವಾದ ಮಹಾಲಕ್ಷ್ಮಿ ಹಾಗೂ ವಿದ್ಯಾಮಾತೆ ಮಹಾ ಸರಸ್ವತಿ ಮೂರ್ತಿಗಳನ್ನು ಕರೆ ತರಲಾಯಿತು.
ರಥಯಾತ್ರೆಯ ಮುಂಭಾಗದಲ್ಲಿ ಮೈಸೂರು, ಪಂಡರಾಪುರ ಹಾಗೂ ಮಂಗಳೂರು ಹರೇಕೃಷ್ಣ ಪಂಥದ ಭಜನಾ ತಂಡಗಳ ಭಜನೆ ಹಾಡಿನ ಮೂಲಕ ಭಕ್ತಿ ಪ್ರಭಾವಳಿ ಮೂಡಿಸಿದರು. 15 ಅರ್ಚಕರು ಮಂತ್ರ ಘೋಷ ಮಾಡಿದರು. ಕೊಂಬು, ಕಹಳೆ ನಾದ ಮೊಳಗಿದವು. ಛತ್ರಿ, ಚಾಮರಗಳೊಂದಿಗೆ ದೊಂದಿಗಳು ಬೆಳಗಿದವು. ಮಂಗಳ ವಾದ್ಯ ನಿನಾದ ಮೂಡಿಸಿತು. ಹರಿದ್ವಾರದಿಂದ ಬಂದ ವಿಪುಲ್ ಶರ್ಮಾ ನೇತೃತ್ವದ ಗಂಗಾರತಿ ತಂಡವು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಿದಾಗ ಶ್ರದ್ಧೆ ಭಕ್ತಿಯ ಪ್ರಜ್ವಲನವಾಯಿತು. ಭಕ್ತರು ಜಯಕಾರ ಹಾಕಿದರು.