ಮಂಗಳೂರು, ಡಿ.5: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಸೂಟರ್ ಪೇಟೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಿರ್ಮಾಣವಾದ 13.90 ಲಕ್ಷ ವೆಚ್ಚದ ನೂತನ ಕೊಠಡಿಯನ್ನು ಶಾಸಕ ವೇದವ್ಯಾಸ್ ಕಾಮತ್ ಉದ್ಘಾಟಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೋಜನೆ ಅನುಮೋದನೆಗೊಂಡು, ಅನುದಾನ ಬಿಡುಗಡೆಯಾಗಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿತ್ತು. ಸದ್ಯ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಸ್ತುತ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕಾದ ಅವಶ್ಯಕತೆ ಇದೆ. ಅದರಲ್ಲೂ ಸರಕಾರಿ ಶಾಲಾ ಕಾಲೇಜುಗಳು ಅಭಿವೃದ್ಧಿಯಾದಷ್ಟು ಹೆಚ್ಚು ಹೆಚ್ಚು ಜನರಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕಾರ್ಯಗಳು ನಿರಂತರವಾಗಿರಬೇಕು ಎಂದು ಶಾಸಕರು ಹೇಳಿದರು.
ಮನಪಾ ಸದಸ್ಯರುಗಳಾದ ಭರತ್ ಕುಮಾರ್ ಎಸ್ ಹಾಗೂ ಸಂದೀಪ್ ಗರೋಡಿ, ಮಂಡಲದ ಮಹಿಳಾ ಮೋರ್ಚಾ ಉಪಾಧ್ಯಕ್ಷೆಯಾದ ಸುರೇಖಾ ರಾವ್, ಬಿಜೆಪಿ ಪ್ರಮುಖರಾದ ರೋಹಿದಾಸ್ ಗೋರಿಗುಡ್ಡ, ರಾಜೇಶ್ ನೆಹರೂ ರಸ್ತೆ, ತನುಜ್, ಮುಖ್ಯ ಶಿಕ್ಷಕಿ ಜಯಲಕ್ಷ್ಮಿ, ಸಹ ಶಿಕ್ಷಕಿ ಸುಕನ್ಯಾ, ನಿವೃತ್ತ ಶಿಕ್ಷಕಿ ವಸಂತಿ, ಮಂಜುಳಾ, ರಜೀನಾ, ಶಿಲ್ಪಾ ಮುಂತಾದವರು ಉಪಸ್ಥಿತರಿದ್ದರು.