ಮಂಗಳೂರು: ಇತ್ತೀಚೆಗೆ ನಿಧನಹೊಂದಿದ ಯಕ್ಷಗಾನ ಭಾಗವತ ಬಲಿಪ ಪ್ರಸಾದರಿಗೆ ಕಲ್ಕೂರ ಪ್ರತಿಷ್ಠಾನದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ಪುಷ್ಪಾರ್ಚನೆಗೈದು ನುಡಿನಮನ ಸಲ್ಲಿಸುತ್ತಾ, ಯಕ್ಷಗಾನ ರಂಗದಲ್ಲಿ ಬಲಿಪ ಪರಂಪರೆಯು ಖ್ಯಾತಿವೆತ್ತ ಪರಂಪರೆಯಾಗಿದೆ. ಈ ಪರಂಪರೆಯಲ್ಲಿ ಬಂದಿರುವ ಶ್ರೇಷ್ಠ ಭಾಗವತರಲ್ಲಿ ಪ್ರಸಾದ ಬಲಿಪರೂ ಓರ್ವರು. ಹಿರಿಯರಿಂದ ಬಳುವಳಿಯಾಗಿ ಬಂದಿರುವ ಅದ್ಭುತ ಕಂಠ ಸಿರಿಯ ಮೂಲಕ ಯಕ್ಷಗಾನ ಕಲಾಪ್ರೇಕ್ಷಕರನ್ನು ರಂಜಿಸಿ ಹಾಗೂ ಕಲಾವಿದರಲ್ಲಿ ಸ್ಪೂರ್ತಿ ತುಂಬುವಲ್ಲಿ ಬಲಿಪ ಪ್ರಸಾದರು ಯಶಸ್ವಿಯಾಗಿದ್ದರು.
ಕಟೀಲು ಮೇಳದಲ್ಲಿ ಮೇಲ್ಪಂಕ್ತಿಯ ಭಾಗವತರಾಗಿ ಮೆರೆದ ಪ್ರಸಾದ ಭಾಗವತರು ನಮ್ಮನ್ನಗಲಿರುವುದು ಯಕ್ಷಗಾನ ಕ್ಷೇತ್ರಕ್ಕೆ ಬಲುದೊಡ್ಡ ನಷ್ಟ ಎಂದರು. ಕಟೀಲು ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ, ಯಕ್ಷಗಾನ ಪ್ರಸಂಗಕರ್ತ ಪೊಳಲಿ ನಿತ್ಯಾನಂದ ಕಾರಂತ, ಹವ್ಯಾಸಿ ಯಕ್ಷಗಾನ ಕಲಾವಿದರಾದ ಕದ್ರಿ ನವನೀತ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಜನಾರ್ದನ ಹಂದೆ, ಜಿ.ಕೆ. ಭಟ್ ಸೇರಾಜೆ, ತಾರಾನಾಥ ಹೊಳ್ಳ, ವಿಜಯಲಕ್ಷ್ಮೀ ಬಿ. ಶೆಟ್ಟಿ, ಸುಧಾಕರ ರಾವ್ ಪೇಜಾವರ, ಸಂಜಯ ರಾವ್ ಮೊದಲಾದವರು ಉಪಸ್ಥಿತರಿದ್ದು ದಿವಂಗತರಿಗೆ ನುಡಿನಮನದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು.