ಮಂಗಳೂರು: ಕೆನರಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ಸಾಹಿತಿ, ಕವಿ, ಚಿಂತಕ ರಮೇಶ ಕೆದಿಲಾಯರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ಕಲ್ಕೂರ ಪ್ರತಿಷ್ಠಾನದ ಸಂಯೋಜನೆಯಲ್ಲಿ ನಡೆಯಿತು. ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ರಮೇಶ ಕೆದಿಲಾಯರು ಕಾವ್ಯ, ಕಥೆ, ವಿಮರ್ಶೆ ಇತ್ಯಾದಿ ಸಾಹಿತ್ಯ ಪ್ರಕಾರಗಳಿಗೆ ಸ್ಮರಣೀಯ ಕೊಡುಗೆ ನೀಡಿದವರು. ಓರ್ವ ವಿಶಿಷ್ಟ ಚಿಂತಕ. ಇವರ ನಿಧನದಿಂದ ಸಾರಸ್ವತ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ಇವರ ಆಯ್ದ ಕೃತಿಗಳ ಮರು ಮುದ್ರಣ ಆಗಬೇಕು ಎಂದರು.
ಪ್ರೊ. ನಾರಾಯಣ ಭಟ್ ಪಾವಲುಕೋಡಿ ಇವರು, ಸಹೋದ್ಯೋಗಿಯಾಗಿದ್ದ ರಮೇಶ ಕೆದಿಲಾಯರೊಂದಿಗಿನ ದೀರ್ಘ ಒಡನಾಟ, ಕಾರ್ಯಶೀಲತೆ, ವಿಮರ್ಶಾತ್ಮಕ ದೃಷ್ಟಿಕೋನ ಇತ್ಯಾದಿಗಳನ್ನು ನೆನಪಿಸಿದರು. ವಿಜಯಲಕ್ಷ್ಮೀ ಬಿ. ಶೆಟ್ಟಿ ಮತ್ತು ದೇವಕಿ ಅಚ್ಚುತ ನುಡಿನಮನಗಳನ್ನು ಅರ್ಪಿಸಿದರು. ಪ್ರೊ. ಜಿ.ಕೆ. ಭಟ್ ಸೇರಾಜೆ ಕಾರ್ಯಕ್ರಮ ನಿರೂಪಿಸಿದರು. ಬಿ.ಎಂ. ರೋಹಿಣಿ, ಡಾ. ಮಂಜುಳಾ ಶೆಟ್ಟಿ, ಮೋಲಿ ಮಿರಾಂದಾ, ತಾರಾನಾಥ ಹೊಳ್ಳ, ಚಂದ್ರಶೇಖರ ಮಯ್ಯ, ಪ್ರೊ. ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.