ಮಿಜಾರು (ಮೂಡುಬಿದಿರೆ), ಸೆ. 3: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳು ಮತ್ತು ವಿಭಾಗಗಳು ಹಾಗೂ ಬೆಂಗಳೂರಿನ ಬೇಸ್ ಫೌಂಡೇಶನ್ ಸಹಯೋಗದಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ರೂಪಿಸಿದ ವೆಬ್ ಬೇಸ್ಡ್ ಅಪ್ಲಿಕೇಷನ್ಸ್ ಅನಾವರಣ ‘ಡೈವಿಂಗ್ ಡಿಜಿಟಲ್’ (ಜಾಗೃತಿ ಪ್ರಾಜೆಕ್ಟ್ ಅನಾವರಣ 2023) ಕಾರ್ಯಕ್ರಮ ಕಾಲೇಜಿನ ಎಂಬಿಎ ಸೆಮಿನಾರ್ ಸಭಾಂಗಣದಲ್ಲಿ ನಡೆಯಿತು.
ಮೂಡುಬಿದಿರೆ ಸಾವಿರ ಕಂಬದ ಜೈನ ಬಸದಿ, ಆಳ್ವಾಸ್ ಹರೀಶ್ ಭಟ್ ಪಕ್ಷಿ ವನ, ಆಳ್ವಾಸ್ ಬಟರ್ ಫ್ಲೈ ಪಾರ್ಕ್, ಆಳ್ವಾಸ್ ನೇಚರ್ ಪಾರ್ಕ್, ಎಚೀವ್ಮೆಂಟ್ ಅವೆನ್ಯೂಸ್, ಹಾಲ್ ಆಫ್ ಫೇಮ್, ಆಳ್ವಾಸ್ ಅಡ್ಮೀಷನ್, ಆಳ್ವಾಸ್ ಕ್ಷೇಮ, ಆಳ್ವಾಸ್ ನಿರಾಮಯ, ಮೆಡಿಕಲ್ ಕ್ಯಾಂಪ್ ಮತ್ತು ಶೋಭಾವನ ಸೇರಿದಂತೆ 11 ವೆಬ್ ಬೇಸ್ಡ್ ಅಪ್ಲಿಕೇಷನ್ ಅನಾವರಣಗೊಂಡವು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಮೂಡುಬಿದಿರೆ ಸಾಮರಸ್ಯದ ತಾಣ. ಇಲ್ಲಿ 18 ಜೈನ ಬಸದಿಯ ಜೊತೆ 18 ದೇವಸ್ಥಾನ, ಮಸೀದಿಗಳಿವೆ. ಸರ್ವ ಧರ್ಮ, ಜಾತಿಯ ಕೇಂದ್ರಗಳಿದ್ದು, ಸಹಬಾಳ್ವೆ ಇದೆ ಎಂದರು. ಒಂದು ಊಟದಲ್ಲಿ ಅನ್ನ ಮುಖ್ಯವಾದರೂ, ವೈವಿಧ್ಯಮಯ ಪದಾರ್ಥಗಳು ಇದ್ದಾಗ ಸ್ವಾದ ಸಂಪನ್ನಭರಿತವಾಗಿರುತ್ತದೆ. ಅದೇ ರೀತಿ ಮೂಡುಬಿದಿರೆ ಜೈನಕಾಶಿಯಾದರೂ, ಸರ್ವರಿಂದ ಸಾಮರಸ್ಯದ ತಾಣವಾಗಿದೆ. ಈ ತಾಣದ ಬಗ್ಗೆ ಅಂತರ್ಜಾಲ ತಾಣದಲ್ಲಿ ಜಗತ್ತಿಗೆ ತಿಳಿಸುವ ಕೆಲಸವನ್ನು ವಿವೇಕ್ ಆಳ್ವ ಅವರ ಮುತುವರ್ಜಿಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಮಾಡಿದ್ದು, ಶ್ಲಾಘನೀಯ.
ಪೂರ್ವಾಶ್ರಮದಲ್ಲಿ ನಾನೂ ಕಂಪ್ಯೂಟರ್ ವಿದ್ಯಾರ್ಥಿಯಾಗಿದ್ದೆನು. ಆಳ್ವಾಸ್ ಮೂಡುಬಿದಿರೆಯಲ್ಲಿನ ಪರಿಪಕ್ವ ಕಾಲೇಜು. ಇಲ್ಲಿನ ವಿದ್ಯಾರ್ಥಿಯೊಬ್ಬ ಭವಿಷ್ಯದಲ್ಲಿ ನೋಬೆಲ್ ಪಡೆಯುವ ಭರವಸೆ ನನಗಿದೆ. ಎಲ್ಲೆಡೆ ಕೆಲಸ ಮತ್ತು ಗಳಿಕೆಗೆ ಕಲಿಕೆ ಇದ್ದರೆ, ಆಳ್ವಾಸ್‌ನಲ್ಲಿ ಕಲಿಕೆಯು ಉತ್ತಮ ವ್ಯಕ್ತಿತ್ವ ರೂಪಿಸುತ್ತಿದೆ. ಮಾನಸಿಕ, ಶಾರೀರಿಕ, ಪರಿವಾರ ಹಾಗೂ ಸಾಮಾಜಿಕ ಸ್ವಾಸ್ಥ್ಯವೇ ಆಧ್ಯಾತ್ಮ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಬದುಕು ಶ್ರೇಷ್ಠತೆ ಮತ್ತು ಗಮ್ಮತ್ತು (ಜಾಲಿ) ನಡುವಿನ ಆಯ್ಕೆ. ಶ್ರೇಷ್ಠತೆಯೆಡೆಗೆ ಹೆಜ್ಜೆ ಇಟ್ಟರೆ ಉನ್ನತಿ ಸಾಧ್ಯ. ಗಮ್ಮತ್ತು ವಿರುದ್ಧ ದಿಕ್ಕಿನೆಡೆಗೆ ಕೊಂಡೊಯ್ಯುತ್ತದೆ ಎಂದರು. ವಿದ್ಯಾರ್ಥಿಗಳ ವ್ಯಕ್ತಿತ್ವ ಕಟ್ಟುವುದು ನಮ್ಮ ಆಯ್ಕೆಯೇ ಹೊರತು, ಸಿಮೆಂಟ್ –ಕಲ್ಲುಗಳ ಕಟ್ಟಡವಲ್ಲ. ಹಿರಿಯ ವಿದ್ಯಾರ್ಥಿಗಳು ತಮ್ಮ ಒಂದು ದಿನವನ್ನು ಕಾಲೇಜಿಗೆ ನೀಡಿ. ಇದು ನಿಮ್ಮ ಒಂದು ವರ್ಷದ ಸಂಬಳವನ್ನು ನೀಡಿದಂತೆ ಎಂದರು. ನಾಯಕತ್ವ ಎಂಬುದು ಹುದ್ದೆಯಲ್ಲ. ಅದು ಜವಾಬ್ದಾರಿ. ಜವಾಬ್ದಾರಿ ನಿರ್ವಹಿಸಲು ಜ್ಞಾನಾರ್ಜನೆ, ತ್ಯಾಗ ಅವಶ್ಯ. ನಾವು ಎಲ್ಲಿದ್ದೇವೆ ಎಂಬ ಅರಿವು ಇರಬೇಕು. ನಮ್ಮಲ್ಲಿ ಸೌಮ್ಯತೆ ಇರಬೇಕು. ಯಾವುದೂ ನಗಣ್ಯವಲ್ಲ. ಮಾನವೀಯತೆ, ಶ್ರೇಷ್ಠತೆಯ ಸಾಧನೆ ನಿಮ್ಮ ಧ್ಯೇಯವಾಗಲಿ ಎಂದರು.
ಬೇಸ್ ಫೌಂಡೇಷನ್ ಸಂಸ್ಥಾಪಕ ಶರತ್ ಬಿಹಾರಿ ದಾಸ್ ಮಾತನಾಡಿ, ಯಾವುದೇ ಕಾರ್ಯವನ್ನು ನಾವು ಪ್ರಾಯೋಗಿಕವಾಗಿ ನಿರ್ವಹಿಸಿದಾಗ ಮೌಲ್ಯದ ಅರಿವಾಗತ್ತದೆ ಎಂದರು. ವಿದ್ಯಾರ್ಥಿಗಳು ಕಾಗೆ ಪ್ರಯತ್ನ, ಕೊಕ್ಕರೆ ಧ್ಯಾನ, ನಾಯಿ ನಿದ್ದೆಯಂತೆ ಎಚ್ಚರ, ಲೌಕಿಕ ಆಕರ್ಷಣೆ ಬಗ್ಗೆ ನಿರಾಸಕ್ತಿ ಹಾಗೂ ಆರಾಮ ವಲಯದಿಂದ ಹೊರಬಂದಾಗ ಯಶಸ್ಸು ಪಡೆಯಲು ಸಾಧ್ಯ. ಇದನ್ನು ಪಂಚಲಕ್ಷಣ ಎನ್ನುತ್ತಾರೆ ಎಂದರು.
ಕಾರ್ಪರೇಟ್ ತರಬೇತುದಾರ ಕಮಾಂಡರ್ ಕೆ. ವಿಜಯಕುಮಾರ್ ಮಾತನಾಡಿ, ಎಷ್ಟೇ ಬುದ್ಧಿವಂತಿಕೆ ಇದ್ದರೂ ಮಾನವೀಯತೆ ಇಲ್ಲದೇ ಇದ್ದರೆ ಬದುಕಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಉದಾಹರಣೆ ಸಹಿತ ವಿವರಿಸಿದರು. ನಿರ್ಮಾಣ ಕ್ಷೇತ್ರದ ವಾಸ್ತುತಜ್ಞೆ ಮಾಲಿನಿ ಸುಧಾಕರ್ ಮಾತನಾಡಿ, ಬದುಕಿನಲ್ಲಿ ಸವಾಲುಗಳು ಸಹಜ. ನೀವು ಎದುರಿಸಬೇಕು. ನಿಮ್ಮ ಕನಸು ನನಸಾಗಿಸುವ ಉತ್ಸಾಹ ಇರಲಿ ಎಂದರು.
ವಿವಿಧ ವೆಬ್ ಬೇಸ್ಡ್ ಅಪ್ಲಿಕೇಷನ್ ಬಗ್ಗೆ ವಿದ್ಯಾರ್ಥಿಗಳಾದ ಯಾಮಿನ್, ಸಪ್ತಮಿ, ರಕ್ಷಾ, ಪ್ರಕೃತಿ, ಚಂದನಾ, ಶ್ರಾವಿತ, ಮಹಮ್ಮದ್ ಯಾನ್, ಸುಮಂತ್, ಶಾಲಿನಿ, ಸೈಯದ್, ಸಾತ್ವಿಕ್ ಮಾಹಿತಿ ನೀಡಿದರು. ಆಯಾ ವೆಬ್ ಬೇಸ್ಡ್ ಅಪ್ಲಿಕೇಷನ್‌ಗಳನ್ನು ಸಂಬಂಧಿತ ಕಾಲೇಜು ಹಾಗೂ ವಿಭಾಗಗಳಿಗೆ ಸಮರ್ಪಿಸಲಾಯಿತು.
ಹಣಕಾಸು ಅಧಿಕಾರಿ ಶಾಂತಾರಾಮ್, ಆಯುರ್ವೇದ ವೈದ್ಯಕೀಯ ಅಧೀಕ್ಷಕಿ ಡಾ.ಸುರೇಖಾ ಪೈ, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದ ಪ್ರಾಂಶುಪಾಲ ಡಾ.ವನಿತಾ ಶೆಟ್ಟಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಹರ್ಷವರ್ಧನ ಪಿ. ಆರ್., ಆತ್ಮ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಸುಬ್ರಹ್ಮಣ್ಯ ಸ್ವೀಕರಿಸಿದರು. ಪೊನ್‌ಕಾಂಟ್ರಾದ ನಿರ್ದೇಶಕ ವಿನೋದ್ ಉಪಸ್ಥಿತರಿದ್ದರು.