ಮಂಗಳೂರು, ಜು. 13: ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ತಿಂಡಿ, ತಿನಿಸುಗಳ ತಯಾರಿಯಲ್ಲಿ ಎತ್ತಿದ ಕೈ. ಅದರಲ್ಲಿಯೂ ಮಳೆಗಾಲದಲ್ಲಿ ಸಿಗುವ ಅಪರೂಪದ ಪ್ರಕೃತಿಜನ್ಯ ವಸ್ತುಗಳನ್ನೇ ಬಳಸಿ ತಯಾರಿಸುವ ಖಾದ್ಯಗಳು ಎಂತವರಲ್ಲಿಯೂ ಬಾಯಲ್ಲಿ ನೀರೂರಿಸುತ್ತವೆ. ಅಂತಹ ತಿಂಡಿಪ್ರಿಯರಿಗಾಗಿ ಯೂತ್ ಆಫ್ ಜಿ.ಎಸ್.ಬಿ ಮಣ್ಣಗುಡ್ಡೆಯ ಗಾಂಧಿಪಾರ್ಕ್ ಸನಿಹದ ವರ್ಟೆಕ್ ಲಾಂಜ್ ನಲ್ಲಿ ಮಳೆಗಾಲದ ಜಿ.ಎಸ್.ಬಿ ಆಹಾರ ಮೇಳ ಆಯೋಜಿಸಿದೆ.
ಇದೇ ಜುಲೈ 15 ರಿಂದ 30 ರ ವರೆಗೆ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ಆಹಾರ ಮೇಳ ನಡೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದಾಗಿದೆ. ಅಲವತ್ತಿ, ತೈಕಿಲಾ ಅಂಬೊಡೆ, ಕೀರ್ಲು, ಪತ್ರಡೋ, ಅಲಂಬೋ ಸಹಿತ ಸುಮಾರು 25 ಬಗೆಯ ತಿಂಡಿ, ತಿನಿಸುಗಳು ಲಭ್ಯವಿದೆ. ಇದಕ್ಕಾಗಿ ಗ್ರಾಹಕರಿಗೆ ವಿಶೇಷ ಪಾಸ್ ಗಳನ್ನು ವರ್ಟೆಕ್ ಲಾಂಜ್, ಬಲ್ಮಠದ ಕೇಸರಿ ಹೋಟೇಲ್, ಮಣ್ಣಗುಡ್ಡೆಯ ಮಹಾಮಾಯಾ ಟ್ರೇಡರ್ಸ್, ವಿ.ಟಿ ರಸ್ತೆಯಲ್ಲಿರುವ ಯೂತ್ ಆಫ್ ಜಿ.ಎಸ್.ಬಿ ಸ್ಟುಡಿಯೋದಲ್ಲಿಯೂ ಪಡೆಯಬಹುದು.
ಪ್ರತಿ ಪಾಸ್ ನಲ್ಲಿ ಇಬ್ಬರಿಗೆ ಪ್ರವೇಶಾವಕಾಶ ಇದ್ದು, ಪಾಸ್ ಗಾಗಿ ಇನ್ನೂರು ರೂಪಾಯಿ ಪಾವತಿಸಿ ಅಷ್ಟೇ ಮೌಲ್ಯದ ಆಹಾರವನ್ನು ಖರೀದಿಸಬಹುದಾಗಿದೆ. ಆಹಾರ ಸೇವಿಸುತ್ತಾ ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಗಳ ಪ್ರದರ್ಶನವನ್ನು ಕೂಡ ವೀಕ್ಷಿಸಬಹುದು.