ಬೆಳ್ತಂಗಡಿ, ಜು. 9: ಕುತೂಹಲ ಪ. ರಾಮಕೃಷ್ಣ ಶಾಸ್ತ್ರಿಗಳ ಬರಹಗಳ ಶಕ್ತಿಯಾಗಿದೆ. ಶಿವರಾಮ ಕಾರಂತರಂತಹ ವಿದ್ವಾಂಸರು ನಮ್ಮ ಮುಂದೆ ಇದ್ದರು ಎಂಬುದನ್ನು ನೆನಪಿಸಿಕೊಳ್ಳುವುದು ಸುಯೋಗವಾಗಿದೆ. ಕಾರಣ ಅವರಂತೆ ಶಾಸ್ತ್ರಿಗಳಿಗೆ ವಿಷಯಗಳನ್ನು ಆಳವಾಗಿ ಸಂಗ್ರಹಿಸಿ ಸಂಕ್ಷಿಪ್ತ ವಿವರ ಕೊಡುವ ಭಾಷಾ ಪಾಂಡಿತ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಇಲ್ಲಿನ ಶ್ರೀ ಮಂಜುನಾಥೇಶ್ವರ ಕಲಾಭವನದಲ್ಲಿ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅಭಿನಂದನ ಸಮಿತಿ ವತಿಯಿಂದ ನಡೆದ 70 ವರ್ಷ ತುಂಬಿದ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರನ್ನು ಅಭಿನಂದಿಸಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಬರವಣಿಗೆ ಮೂಲಕ ಬದುಕು ಕಟ್ಟಿಕೊಂಡವರು ಪ.ರಾ.ಶಾಸ್ತ್ರಿಗಳು. ಅವರು ನೆಲದ ಸ್ಪರ್ಶವನ್ನು ಬದುಕಿನುದ್ದಕ್ಕೂ ಇಟ್ಟುಕೊಂಡವರು. ಮಾಹಿತಿಗಳನ್ನು ಬೇರೆ ಬೇರೆ ಆಕರಗಳಿಂದ ಸಂಗ್ರಹಿಸಿ ತನ್ನ ಜ್ಞಾನದಲ್ಲಿರಿಸಿಕೊಂಡು ಲೇಖನವಾಗಿ ಬರೆಯುವುದು ಅವರಿಗೆ ಸಿದ್ಧಿಸಿದೆ ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಪ.ರಾ.ಶಾಸ್ತ್ರಿಗಳ ಸಾಹಿತ್ಯ ಬದುಕು ರೂಪಿಸುವಂಥದ್ದು. ಪಠ್ಯಪುಸ್ತಕಗಳಲ್ಲಿ ಅವರ ಬರಹಗಳು ಇನ್ನಷ್ಟು ಬರುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಿದ್ದು ಅವರ ಬರಹಗಳ ಪ್ರೇರಣೆಯಿಂದ ಇನ್ನಷ್ಟು ಮಂದಿ ಹುಟ್ಟಿಬರಲಿ ಎಂದರು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಎನ್. ಅಶೋಕ್ ಭಟ್ ಉಜಿರೆ ಅಭಿನಂದನ ಮಾತುಗಳನ್ನಾಡಿದರು. ಪ.ರಾಮಕೃಷ್ಣ ಶಾಸ್ತ್ರಿಗಳು ನೈಜ ಚಿತ್ರಣಗಳಾಗಿವೆ. ಅವರ ಬರಹ ಮತ್ತು ಬದುಕಿನಲ್ಲಿ ತಪಸ್ಸಿದೆ ಎಂದರು. ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಪಾವಂಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ಪ.ರಾಮಕೃಷ್ಣ ಶಾಸ್ತ್ರಿಗಳ ಪತ್ನಿ ಶಾರದಾ ಆರ್.ಶಾಸ್ತ್ರಿ ಇದ್ದರು.
ಐದು ಪುಸ್ತಗಳ ಬಿಡುಗಡೆ: ಶಾಸ್ತ್ರಿಗಳು ಬರೆದ ಮಳೆ ಮಳೆ, ನಟನ ಮನೋಹರಿ, ರೋಚಕ ಲೋಕ, ಪ್ರಪಂಚದ ಸೋಜಿಗಗಳು, ಲಕ್ಷ್ಮೀ ಮಚ್ಚಿನ ಬರೆದ ಸಾಹಿತಿ ಪ.ರಾ.ರಾಮಕೃಷ್ಣ ಶಾಸ್ತ್ರಿ ಬದುಕು ಬರಹ ಬವಣೆ ಕೃತಿಗಳನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ರಾಮಕೃಷ್ಣ ಶಾಸ್ತ್ರಿ ಅಭಿನಂದನ ಸಮಿತಿ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಪ.ರಾಮಕೃಷ್ಣ ಶಾಸ್ತ್ರಿಗಳನ್ನು ಅಭಿನಂದಿಸಲಾಯಿತು. ಸಂಚಾಲಕ ಸಂಪತ್ ಬಿ. ಸುವರ್ಣ ಸ್ವಾಗತಿಸಿದರು. ವಿಭಾ ಕೃಷ್ಣಪ್ರಕಾಶ ಉಳಿತ್ತಾಯ ಸಮ್ಮಾನ ಪತ್ರ ವಾಚಿಸಿದರು. ನ್ಯಾಯವಾದಿ ಧನಂಜಯ್ ರಾವ್ ನಿರೂಪಿಸಿದರು. ಇದಕ್ಕೂ ಮೊದಲು ಯಕ್ಷಗಾನ ಭಾಗವತ ಗಾನ ಮತ್ತು ಪ.ರಾಮಕೃಷ್ಣ ಶಾಸ್ತ್ರಿಗಳ ಸಾಹಿತ್ಯ ಅವಲೋಕನ ಕಾರ್ಯಕ್ರಮ ನಡೆಯಿತು.