ಮಂಗಳೂರು, ಜೂ. 27: ಗುಣಮಟ್ಟದ ಶಿಕ್ಷಣ, ಸೌಲಭ್ಯಗಳಿಗಾಗಿ ಮಂಗಳೂರಿನ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಪ್ರಾಯೋಜಿತ ಕೆನರಾ ಇಂಜಿನಿಯರಿಂಗ್ ಕಾಲೇಜು ನ್ಯಾಕ್ ಮೌಲ್ಯಮಾಪನ ತಂಡದಿಂದ ‘ಎ’ ಗ್ರೇಡ್ ಮಾನ್ಯತೆ ಪಡೆದುಕೊಂಡಿದೆ. ಕಾಲೇಜಿನ ಶೈಕ್ಷಣಿಕ ಮಟ್ಟ, ಸೌಲಭ್ಯಗಳ ಪರಿಶೀಲನೆಗೆ ಕಳೆದ ಜೂನ್ 8 ಮತ್ತು 9 ರಂದು ಕಾಲೇಜಿಗೆ ಭೇಟಿ ನೀಡಿದ್ದ ನ್ಯಾಕ್ ತಜ್ಞರ ತಂಡದ ಪರಿಶೀಲನೆ, ಅಧ್ಯಯನ ವರದಿಯ ಆಧಾರದಲ್ಲಿ ನ್ಯಾಕ್ ಸಂಸ್ಥೆ ಕಾಲೇಜಿಗೆ 3.24 ಅಂಕಗಳೊಂದಿಗೆ ಎ ಗ್ರೇಡ್ ಮಾನ್ಯತೆಯ ಫಲಿತಾಂಶವನ್ನು ಘೋಷಿಸಿದೆ.
ಕಾಲೇಜಿನಲ್ಲಿ ಪಠ್ಯಕ್ರಮ, ಶೈಕ್ಷಣಿಕ ಗುಣಮಟ್ಟ, ಸಂಶೋಧನೆ ಮತ್ತು ಅಭಿವೃದ್ಧಿ, ಎನ್ನೆಸ್ಸೆಸ್ ಇತ್ಯಾದಿ ವಿಸ್ತರಣಾ ಚಟುವಟಿಕೆಗಳು, ಮೂಲಸೌಕರ್ಯ, ಸೌಲಭ್ಯಗಳು, ಹಸಿರು ಕ್ಯಾಂಪಸ್, ಆಡಳಿತಾತ್ಮಕ ಅಂಶಗಳು, ಉತ್ತಮ ಪದ್ಧತಿಗಳು, ಸಂಪನ್ಮೂಲಗಳು ಮತ್ತು ತ್ಯಾಜ್ಯ ನಿರ್ವಹಣೆ ಹೀಗೆ ವಿಭಾಗವಾರು ಪರಿಶೀಲನೆ, ಗುಣಮಟ್ಟದ ಮೌಲ್ಯಮಾಪನ ನಡೆಸಿರುವ ತಂಡ ಕಾಲೇಜಿನ ಸಮಗ್ರ ವ್ಯವಸ್ಥೆಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದೆ.
ಕರಾವಳಿ ಕರ್ನಾಟಕದ ಪ್ರತಿಷ್ಠಿತ ತಾಂತ್ರಿಕ ಕಾಲೇಜುಗಳ ಪೈಕಿ ಒಂದಾಗಿರುವ ಕೆನರಾ ಇಂಜಿನಿಯರಿಂಗ್ ಕಾಲೇಜು ಶಿಕ್ಷಣ, ಸಂಶೋಧನೆ, ಅಭಿವೃದ್ಧಿ ಹೀಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ಹಸಿರ ಮಡಿಲಲ್ಲಿ ಆಕರ್ಷಕ ಕ್ಯಾಂಪಸ್, ಗುಣಮಟ್ಟದ ಸೌಲಭ್ಯ, ಅತ್ಯಾಧುನಿಕ ಕಲಿಕಾ ಸ್ನೇಹೀ ಸೌಲಭ್ಯಗಳೊಂದಿಗೆ, ಪರಿಪೂರ್ಣತೆಯ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಉದ್ಯಮ ರಂಗದ ಪ್ರತಿಷ್ಠಿತ ಕಂಪೆನಿಗಳ ಜತೆ ಸಂಪರ್ಕ, 170ಕ್ಕೂ ಅಧಿಕ ಕಂಪೆನಿಗಳಿಂದ ವಿದ್ಯಾರ್ಥಿಗಳ ನೇರ ಕ್ಯಾಂಪಸ್ ನೇಮಕಾತಿ, ಅತ್ಯುನ್ನತ ವೇತನ ಶ್ರೇಣಿಯ ಉದ್ಯೋಗಾವಕಾಶಗಳು ಅರ್ಹ ವಿದ್ಯಾರ್ಥಿಗಳಿಗೆ ದೊರೆಯುತ್ತಿವೆ. ಬಿ.ಇ. ಪದವಿ ಶಿಕ್ಷಣದಲ್ಲಿ 630 ಇನ್ಟೇಕ್ ಹೊಂದಿರುವ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್, ಇನ್ಫರ್ಮೇಶನ್ ಸೈನ್ಸ್ ಆಂಡ್ ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಕೋರ್ಸುಗಳು ಎನ್.ಬಿ.ಎ ಮಾನ್ಯತೆಯನ್ನೂ ಹೊಂದಿವೆ. ಪ್ರಸ್ತುತ ತಾಂತ್ರಿಕ ಶಿಕ್ಷಣದಲ್ಲಿ ಹೆಚ್ಚಿನ ಬೇಡಿಕೆಯಿರುವ ಕಂಪ್ಯೂಟರ್ ಸೈನ್ಸ್ ಆಂಡ್ ಡಿಸೈನ್, ಕಂಪ್ಯೂಟರ್ ಸೈನ್ಸ್ ಆಂಡ್ ಬ್ಯುಸಿನೆಸ್ ಸಿಸ್ಟಮ್, ಆ ರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆಂಡ್ ಇಂಜಿನಿಯರಿಂಗ್ ಕೋರ್ಸುಗಳೂ ಇಲ್ಲಿವೆ.
ಕಾಲೇಜಿನ ಎಕ್ರೆಡಿಟೇಶನ್ ಡೀನ್ ಡಾ. ಎನ್. ವೆಂಕಟೇಶ್ ನೇತೃತ್ವದಲ್ಲಿ ಆಡಳಿತ ಮಂಡಳಿ, ಡೀನ್ಸ್, ವಿಭಾಗ ಮುಖ್ಯಸ್ಥರು, ಬೋಧಕ, ಬೋಧಕೇತರರು, ಹೆತ್ತವರು, ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಈ ಸಾಧನೆ ಸಾಧ್ಯವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಗಣೇಶ್ ವಿ.ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಲೇಜಿನ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕೆನರಾ ಹೈಸ್ಕೂಲ್ ಎಸೋಸಿಯೇಷನ್ ಗೌರವ ಕಾರ್ಯದರ್ಶಿ ಎಂ. ರಂಗನಾಥ್ ಭಟ್ ಮುಂದಿನ ದಿನಗಳಲ್ಲಿ ಕಾಲೇಜನ್ನು ಸ್ವಾಯತ್ತ ಸಂಸ್ಥೆಯಾಗಿ ಉನ್ನತೀಕರಿಸುವ ಯೋಜನೆ ಇದೆ ಎಂದಿದ್ದಾರೆ.