ವಿದ್ಯಾಗಿರಿ(ಮೂಡುಬಿದಿರೆ), ಜೂನ್ 20: ಬದುಕು ಒಂದು ಸರ್ಕಸ್. ಸಿನಿಮಾ ಪ್ರಪಂಚ ಮತ್ತೊಂದು ವಿಭಿನ್ನ ಸರ್ಕಸ್. ನೀವು ಬದುಕಿನ ಸರ್ಕಸ್ ಅನ್ನು ಸಿನಿಮಾ ‘ಸರ್ಕಸ್’ ನಲ್ಲಿ ನೋಡಿ ನಲಿದಾಡಬಹುದು ಎಂದು ಬಿಗ್‌ಬಾಸ್ ವಿಜೇತ, ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಆಳ್ವಾಸ್ ಫಿಲ್ಮ್ ಸೊಸೈಟಿ ಮತ್ತು ತುಳು ಸಂಘದ ಸಹಯೋಗದಲ್ಲಿ ಮಂಗಳವಾರ ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸರ್ಕಸ್’ ತುಳು ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ ಅವರು ಮಾತನಾಡಿದರು. ಸಿನಿಮಾ ಬೇರೆಯದೇ ಪ್ರಪಂಚ. ತಂತ್ರಜ್ಞಾನ, ಕಲೆ, ಬದುಕು ಎಲ್ಲವೂ ಅಲ್ಲಿದೆ. ನಿರ್ದೇಶಕನಿಗೆ ಎಲ್ಲಾ ರೀತಿಯ ಕಲಾ ಪ್ರಕಾರಗಳು ಗೊತ್ತಿರಬೇಕು ಎಂದರು. ಎಂಟು ಸಿನಿಮಾಗಳ ಸೋಲು ಹಾಗೂ ಗಿರಿಗಿಟ್ಲೆ ಎಂಬ ಗೆಲುವು ‘ಸರ್ಕಸ್’ ಸಿನಿಮಾದ ಹಿಂದಿನ ಶ್ರಮ ಎಂದು ಭಾವುಕವಾಗಿ ನುಡಿದ ಅವರು, ‘ಸರ್ಕಸ್ ಸಿನಿಮಾ ಬಿಗ್ ಬಾಸ್‌ಗೆ ಹೋಗುವುದಕ್ಕಿಂತ ಮೊದಲಿನ ಕನಸಾಗಿತ್ತು. ಈಗ ಕನಸುಗಳು ನನಸಾಗುತ್ತಿವೆ. ಆದರೆ, ನನ್ನ ಆದ್ಯತೆ ಮೊದಲು ಈ ನೆಲಕ್ಕೆ ಎಂದರು. ಕಲಾವಿದರಿಗೆ ಬೇಕಾಗಿರುವುದು ಚಪ್ಪಾಳೆ, ಉತ್ತಮ ಪ್ರೇಕ್ಷಕರ ಚಪ್ಪಾಳೆ ಕಲಾವಿದನಲ್ಲಿ ಪ್ರೋತ್ಸಾಹ ತುಂಬಿಸುತ್ತದೆ. ಕಲಾವಿದರನ್ನು ಪ್ರೋತ್ಸಾಹಿಸುವ ದೊಡ್ಡ ಸಂಸ್ಥೆ ಆಳ್ವಾಸ್. ವಿದ್ಯಾರ್ಥಿಗಳಿಗೆ ಪರಿಪೂರ್ಣ ಶಿಕ್ಷಣ ನೀಡುವ ಏಕೈಕ ವಿದ್ಯಾಸಂಸ್ಥೆ ಎಂದು ಶ್ಲಾಘಿಸಿದರು.
ಕಲಾವಿದ ಭೋಜರಾಜ್ ವಾಮಂಜೂರು ಮಾತನಾಡಿ, ಕಲಾವಿದರ ಪ್ರತಿಭೆಗೆ ವೇದಿಕೆ ಹಾಗೂ ಪ್ರೋತ್ಸಾಹ ಬೇಕು. ಆಳ್ವಾಸ್ ಕಾಲೇಜು ಕಲಾವಿದರ ದೇವಸ್ಥಾನ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ನಾಡಿನ ದೊಡ್ಡ ಕಲಾ ಪೋಷಕರು. ಆಳ್ವಾಸ್ ಸಂಸ್ಥೆಯು ವಿದ್ಯಾರ್ಥಿಗಳಿಗೂ, ಸಾಧಕರಿಗೂ ಆಶ್ರಯ ತಾಣ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಉತ್ತಮ ಸಿನಿಮಾಗಳನ್ನು ಪ್ರೋತ್ಸಾಹಿಸುವುದೂ ಒಂದು ಉತ್ತಮ ಕಲೆ. ರೂಪೇಶ್ ವಿನಯವಂತಿಕೆ ಮೆಚ್ಚತಕ್ಕದ್ದು. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಸಿನಿಮಾ ಪ್ರೋತ್ಸಾಹಿಸುವ ‘ಫಿಲ್ಮ್ ಸೊಸೈಟಿ’ ಆರಂಭಿಸಿದ್ದು, ಸದಭಿರುಚಿಯ ಸಿನಿಮಾ ನಿರ್ಮಾಣದ ಕುರಿತೂ ಕಾರ್ಯಾಗಾರ ನಡೆಸಲಾಗುವುದು ಎಂದರು.
ಕೆಜಿಎಫ್ ಖ್ಯಾತಿಯ ಯಶ್ ಶೆಟ್ಟಿ, ನಟಿ ರಚನಾ ರೈ, ಸಂಗೀತ ನಿರ್ದೇಶಕ ರಾಯ್ ವೆಲೆಂಟೈನ್ ಸಲ್ದಾನಾ, ರೋಶನ್ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರ್, ಸಂದೀಪ್ ಶೆಟ್ಟಿ, ಪ್ರಕಾಶ್, ಮಂಜುನಾಥ್, ಪದವಿಪೂರ್ವ ವಾಣಿಜ್ಯ
ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಇದ್ದರು. ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ ನಿರೂಪಿಸಿದರು.