ಮಂಗಳೂರು: ಹಸುವಿನ ಸಂತತಿಯನ್ನು ವೃದ್ಧಿಸುವಲ್ಲಿ ನಾವೆಲ್ಲರೂ ಜವಾಬ್ದಾರಿಯುತವಾಗಿ ತೊಡಗುವಂತಾಗಬೇಕು. ಈ ನೆಲೆಯಲ್ಲಿ ಪ್ರದೀಪ ಕುಮಾರ ಕಲ್ಕೂರ ಅವರು ತಮ್ಮ ಸ್ವಗೃಹದಲ್ಲಿ ಹಸುವಿನ ಸಾಕಣೆಯೊಂದಿಗೆ ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.
ಮನೆ ಮನೆಗಳಲ್ಲೂ ಸ್ಥಳೀಯ ಗೋವನ್ನು ಸಾಕಲು ಈ ಕಾರ್ಯಕ್ರಮ ಪ್ರೇರಣೆಯಾಗಲೆಂದರು.
ಕಾಸರಗೋಡು ಗಿಡ್ಡ ತಳಿಯ ಹಸು ದೇವಕಿಯ ನವಜಾತ ಕರುವಿಗೆ ನಾಮಕರಣ ಮಾಡುವ ಕಾರ್ಯಕ್ರಮ ಕಲ್ಕೂರ ಪ್ರತಿಷ್ಠಾನದಿಂದ ಹಮ್ಮಿಕೊಳ್ಳಲಾಗಿತ್ತು. ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಕದ್ರಿ ಕಂಬಳ ರಸ್ತೆ ಮಂಜುಪ್ರಾಸಾದ, ವಿಶ್ವೇಶತೀರ್ಥ ವೇದಿಕೆ, ವಾದಿರಾಜ ಮಂಟಪದಲ್ಲಿ ಮಂಗಳೂರು ಮಹಾಮಾಯಿ ದೇವಸ್ಥಾನದ ಶತಮಾನ ಆಚರಿಸುತ್ತಿರುವ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಕಲಾವಿದರಿಂದ ‘ಧರಣೀ ಮಂಡಲ ಮಧ್ಯದೊಳಗೆ’ ಎಂಬ ಸಾಂಪ್ರದಾಯಿಕ ಯಕ್ಷಗಾನ ಶೈಲಿಯ ಗೋಗೀತೆಯೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆನೀಡಲಾಯಿತು.
ಶ್ರೀ ಕ್ಷೇತ್ರ ಕದ್ರಿಯ ವೇ.ಮೂ. ಡಾ. ಪ್ರಭಾಕರ ಅಡಿಗ, ವೇ.ಮೂ. ಡಾ. ಸತ್ಯಕೃಷ್ಣ ಭಟ್ (ಬಾಳಂಭಟ್), ವೇ.ಮೂ ರವಿ ಅಡಿಗ ಕದ್ರಿ, ವೇ. ಮೂ. ಶ್ರೀರಂಗ ಭಟ್ ಕದ್ರಿ ಇವರು ವೈದಿಕ ಮಾರ್ಗದರ್ಶನ ನೀಡಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ, ಪ್ರತೀ ಮನೆಗಳಲ್ಲಿ ವಸತಿ ಸಂಕೀರ್ಣಗಳಲ್ಲಿ ಸ್ಥಳೀಯ ವಂಶದ ದನಗಳನ್ನು ಸಾಕುವಂತಾಗಲಿ. ಇದು ಮನೆಯ ವಾತಾವರಣಕ್ಕೂ, ಆರೋಗ್ಯಕ್ಕೂ ಪೂರಕ ಎಂದು ಸುಮಾರು ಎರಡು ವರ್ಷಗಳ ತಮ್ಮ ಸ್ವಾನುಭವವನ್ನು ತಿಳಿಸಿದರು.
ಈ ಸಂದರ್ಭ ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಜಿ.ಕೆ. ಭಟ್ ಸೇರಾಜೆ, ಎ. ಚಂದ್ರಶೇಖರ ಮಯ್ಯ, ಲೀಲಾಕ್ಷ ಕರ್ಕೇರ, ತಾರಾನಾಥ ಹೊಳ್ಳ, ಜನಾರ್ದನ ಹಂದೆ, ಪ್ರೊ. ಸುಧಾಕರ ರಾವ್ ಪೇಜಾವರ, ಪೂರ್ಣಿಮಾ ರಾವ್ ಪೇಜಾವರ, ಸಂಜಯರಾವ್, ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ, ಅಶ್ವತ್ಥಾಮ ರಾವ್ ಮೊದಲಾದವರು ಉಪಸಿತರಿದ್ದರು.