Sunday, January 19, 2025
Sunday, January 19, 2025

ಷರತ್ತುಗಳಿಲ್ಲದೆ ಗ್ಯಾರಂಟಿಗಳನ್ನು ಈಡೇರಿಸಿ: ಕಾಂಗ್ರೆಸ್ ಗೆ ಶಾಸಕ ವೇದವ್ಯಾಸ ಕಾಮತ್ ಸವಾಲು

ಷರತ್ತುಗಳಿಲ್ಲದೆ ಗ್ಯಾರಂಟಿಗಳನ್ನು ಈಡೇರಿಸಿ: ಕಾಂಗ್ರೆಸ್ ಗೆ ಶಾಸಕ ವೇದವ್ಯಾಸ ಕಾಮತ್ ಸವಾಲು

Date:

ಮಂಗಳೂರು, ಮೇ 21: ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಗೆ ವಿವಿಧ ಭರವಸೆಗಳನ್ನು ಕೊಟ್ಟು ಜನಮನ ಸೆಳೆದು ಮತವನ್ನು ಪಡೆದ ನಂತರ ಕಾಂಗ್ರೆಸ್ ಈ ಗ್ಯಾರಂಟಿಗಳ ಜಾರಿಗೆ ಕೇವಲ ತಾತ್ವಿಕ ಒಪ್ಪಿಗೆ ನೀಡಿ ಎಲ್ಲದಕ್ಕೂ ಹೆಚ್ಚಿನ ಷರತ್ತುಗಳು ಅನ್ವಯವಾಗುತ್ತವೆ ಎಂದು ಹೇಳುತ್ತಿರುವುದನ್ನು ಕೇಳಿದಾಗ ಕರ್ನಾಟಕದ ಜನತೆಗೆ ಕಾಂಗ್ರೆಸ್ ದ್ರೋಹ ಬಗೆಯುತ್ತಿರುವುದು ಸ್ಪಷ್ಟವಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.

ಕೇವಲ ಅಲ್ಪ ಸ್ವಲ್ಪ ಮಾತ್ರ ಗ್ಯಾರಂಟಿಗಳನ್ನು ಈಡೇರಿಸಿ ಜನರ ಕಣ್ಣಿಗೆ ಮಣ್ಣರಚುವ ಪ್ರಯತ್ನ ಮಾಡುತ್ತಿದೆ ಎಂಬ ಅನುಮಾನ ಮೂಡಿದೆ. ಪ್ರತಿಯೊಂದು ರೇಲಿಗಳಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯನವರು ಗ್ಯಾರಂಟಿಗಳನ್ನು ಕೊಡುತ್ತಾ ಹೋದರು. ಆದರೆ ಎಲ್ಲಿಯೂ ಷರತ್ತುಗಳು ಅನ್ವಯವಾಗುತ್ತವೆ ಎಂದು ಹೇಳಿರಲಿಲ್ಲ. ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿಯವರು ಕೂಡ ಉಚಿತ ಘೋಷಣೆಗಳನ್ನು ಮಾಡುತ್ತಾ ಹೋದರು. ಅವರು ಕೂಡ ಷರತ್ತುಗಳ ಬಗ್ಗೆ ಹೇಳಲಿಲ್ಲ. ಡಿ.ಕೆ ಶಿವಕುಮಾರ್ ಅವರು ಭಾಷಣ ಮಾಡುತ್ತ, ಬಸ್ ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಫ್ರೀ, ಮಹಿಳೆಯರು ಮದುವೆಗೆ ಹೋಗುವಾಗಲೂ ಫ್ರೀ, ಶಾಪಿಂಗ್ ಹೋಗುವಾಗಲೂ ಫ್ರೀ – ಎಲ್ಲರಿಗೂ ಬಸ್ ಪ್ರಯಾಣ ಫ್ರೀ ಎನ್ನುವಂತೆ ಭರವಸೆ ಕೊಟ್ಟಿದ್ದರು.

ಆದರೆ, ಈಗ ಮಾತ್ರ ಕೇವಲ ಕೆಂಪು ಬಸ್ಸಿನಲ್ಲಿ ಮಾತ್ರ ಫ್ರೀ, ಐಷಾರಾಮಿ ಬಸ್ ಗಳಿಗೆ ಈ ಉಚಿತ ಅನ್ವಯಿಸುವುದಿಲ್ಲ. ನಿರ್ದಿಷ್ಟ ದೂರದ ವರೆಗೆ ಮಾತ್ರ ಫ್ರೀ ಎನ್ನುತ್ತ ಎಲ್ಲದಕ್ಕೂ ಷರತ್ತುಗಳು ಗ್ಯಾರಂಟಿ ಎನ್ನುತ್ತಿದ್ದಾರೆ. ರಾಜ್ಯದ ಎಲ್ಲ ಲಕ್ಷಾಂತರ ಮಹಿಳೆಯರು ಧರ್ಮಸ್ಥಳ, ರಾಮೇಶ್ವರ, ತಿರುಪತಿ, ಮಂತ್ರಾಲಯ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಉಚಿತವಾಗಿ ತೆರಳಬಹುದು ಎಂದು ಭಾವಿಸಿ ಕಾಂಗ್ರೆಸ್ ಗೆ ಓಟು ಹಾಕಿದರು. ಆದರೆ ಈಗ ಆ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ಇಲ್ಲ ಎನ್ನುತ್ತಿದ್ದಾರೆ ಕಾಂಗ್ರೆಸ್ ನಾಯಕರು. ಈ ರೀತಿ ಆಸೆಪಟ್ಟು ಕಾಂಗ್ರೆಸ್ ಗೆ ಮತ ಹಾಕಿದ ಮಹಿಳೆಯರಿಗೆ ಈಗ ದುಃಖವಾಗುವಂತೆ ಕಾಂಗ್ರೆಸ್ ನಾಯಕರು ವರ್ತಿಸುತ್ತಿದ್ದಾರೆ.

ಎಲ್ಲ ವೇದಿಕೆಗಳಲ್ಲಿ ಗ್ಯಾರಂಟಿ ಘೋಷಣೆ ಮಾಡಿ, ಷರತ್ತುಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡದೆ ಮೋಸ ಮಾಡುತ್ತಿದ್ದಾರೆ. ಈ ಉಚಿತಗಳ ಜಾರಿಗೆ ಅದೆಷ್ಟು ಸಾವಿರ ಕೋಟಿ ಆರ್ಥಿಕ ವೆಚ್ಚದ ಹೊರೆ ಬೀಳುತ್ತದೆ ಎಂಬುದನ್ನು ಲೆಕ್ಕ ಹಾಕದೆ ಕೇವಲ ಅಧಿಕಾರಕ್ಕೆ ಬರುವ ಉದ್ದೇಶದಿಂದ ಮಾತ್ರ ಸುಳ್ಳು ಭರವಸೆ ನೀಡಿರುವುದು ಸ್ಪಷ್ಟವಾಗಿದೆ. ಸಂಪುಟ ಸಭೆಯ ಬಳಿಕ ಮೊದಲ ಸುದ್ದಿಗೋಷ್ಠಿಯಲ್ಲಿ ಇದಕ್ಕೆ ಕೇವಲ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದಿರುವುದು ಕಾಂಗ್ರೆಸಿಗರ ವಂಚನೆ ಪ್ರವೃತ್ತಿಯನ್ನು ಮತ್ತೊಮ್ಮೆ ಖಾತ್ರಿಪಡಿಸಿದೆ ಎಂದು ಶಾಸಕ ಕಾಮತ್ ಟೀಕಿಸಿದರು.

ಈಗ 50-60 ಸಾವಿರ ಕೋಟಿ ರೂ ವೆಚ್ಚ ತಗಲುತ್ತದೆ ಎನ್ನುವ ನಿಮಗೆ ಅಂದು ಉಚಿತ ಗ್ಯಾರಂಟಿ ಘೋಷಿಸುವಾಗ ಇದೆಲ್ಲ ಯೋಚನೆ ಏಕೆ ಬರಲಿಲ್ಲ? ಎಂದು ಶಾಸಕ ಕಾಮತ್ ತರಾಟೆಗೆ ತೆಗೆದುಕೊಂಡರು. ಈಗ ಷರತ್ತುಗಳು ಅನ್ವಯವಾಗುತ್ತವೆ, ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಕೊಡುತ್ತೇವೆ, ಮಾನದಂಡಗಳನ್ನು ರೂಪಿಸುತ್ತೇವೆ ಎಂದು ಹೇಳುತ್ತಿರುವುದು ಕೇವಲ ಅಧಿಕಾರಕ್ಕಾಗಿ ಮಾತ್ರ ಈ ಗ್ಯಾರಂಟಿಗಳನ್ನು ನೀಡಿದ್ದು ಎಂಬ ಸತ್ಯವನ್ನು ಬಹಿರಂಗಪಡಿಸಿದೆ ಎಂದು ಕಾಮತ್ ಹೇಳಿದರು.

ಜನರು ಕಾಂಗ್ರೆಸ್ ಬಗ್ಗೆ ಇಟ್ಟಿರುವ ನಿರೀಕ್ಷೆ ಹುಸಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಯಾವ ದೃಷ್ಟಿಕೋನದಲ್ಲಿ ಆಡಳಿತ ನೀಡಲಿದೆ ಎಂಬುದು ವೇದ್ಯವಾಗುತ್ತದೆ. ರಾಜ್ಯದ ಎಲ್ಲ ಮಹಿಳೆಯರಿಗೆ ತಿಂಗಳಿಗೆ 2000 ರೂ ಕೊಡ್ತೇವೆ, ಎಲ್ಲ ನಿರುದ್ಯೋಗಿ ಯುವಕರಿಗೆ 3,000 ರೂ ಕೊಡ್ತೇವೆ. ಎಲ್ಲರಿಗೂ ಉಚಿತ ವಿದ್ಯುತ್ ಕೊಡ್ತೇವೆ ಎಂದಿದ್ದೀರಲ್ಲಾ, ಈಗ ಅದನ್ನು ಷರತ್ತುಗಳಿಲ್ಲದೆ ಈಡೇರಿಸಿ. ಮತದಾರರು ಓಟು ಹಾಕುವಾಗ ಷರತ್ತು ಹಾಕಿಲ್ಲ. ಮತ್ತೆ ಈಗ ಅವರಿಗೆ‌ ಕೊಟ್ಟ ಗ್ಯಾರಂಟಿಗಳಿಗೆ ಯಾಕೆ ಷರತ್ತು ಹಾಕುತ್ತೀರಿ ಸಿದ್ಧರಾಮಯ್ಯನವರೇ? ಎಂದು ಶಾಸಕರು ಪ್ರಶ್ನಿಸಿದರು.

ವೋಟು ಪಡೆದು ಗೆದ್ದ ಬಳಿಕ ಯಾವುದೇ ಷರತ್ತುಗಳನ್ನು ಹಾಕಬೇಡಿ. ಷರತ್ತುಗಳಿಲ್ಲದೆ ಎಲ್ಲರಿಗೂ ನೀವು ಹೇಳಿದ ಉಚಿತಗಳನ್ನು ಕೊಟ್ಟರೆ ಕಾಂಗ್ರೆಸ್ ಸರಕಾರದ ಧೈರ್ಯವನ್ನು ಮೆಚ್ಚಿಕೊಳ್ಳಬಹುದು. ನಿಮ್ಮ ಮೊದಲ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ 20 ನಿಮಿಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸುವುದಕ್ಕೇ ಸಮಯ ಮೀಸಲಿಟ್ಟಿರಿ. ನಿಮ್ಮನ್ನು ನಂಬಿ ಗೆಲ್ಲಿಸಿದ ಜನರಿಗೆ ಮೋಸ ಮಾಡಬೇಡಿ ಎಂದು ಶಾಸಕ ಕಾಮತ್ ಹೇಳಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!