ಮೂಲ್ಕಿ, ಮೇ 3: (ಉಡುಪಿ ಬುಲೆಟಿನ್ ವರದಿ) ಕರ್ನಾಟಕವನ್ನು ಆಧುನಿಕ ಮೂಲಭೂತ ಸೌಕರ್ಯ, ಉದ್ಯೋಗ, ಕೃಷಿ, ಮೀನುಗಾರಿಕೆ, ಬಂದರು, ಆರೋಗ್ಯ, ಶಿಕ್ಷಣ ಮತ್ತು ಉತ್ಪಾದನಾ ವಲಯದಲ್ಲಿ ಸೂಪರ್ ಪವರ್ ಮಾಡಲು ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿಯನ್ನು ಆಶೀರ್ವದಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬುಧವಾರ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ 66 ಬಳಿಯ ಕೊಲ್ನಾಡಿನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
‘ಭಾರತ್ ಮಾತಾ ಕೀ ಜೈ’ ‘ಭಜರಂಗ ಬಲಿ ಕೀ ಜೈ’ ಎಂದು ಮಾತನ್ನು ಆರಂಭಿಸಿದ ಪ್ರಧಾನಿ, “ಪರಶುರಾಮನ ಕ್ಷೇತ್ರದ ಎನ್ನ ಮೋಕೆದ ತುಳುವಪ್ಪೆ ಜೋಕುಲೆಗ್ ಸೋಲ್ಮೆಲು” ಎಂದು ನಿರರ್ಗಳವಾಗಿ ತುಳುವಿನಲ್ಲೇ ತಮ್ಮ ಮಾತನ್ನು ಆರಂಭಿಸುತ್ತಿದ್ದಂತೆ ಸೇರಿದ ಲಕ್ಷಾಂತರ ಮಂದಿ ಮೋದಿ ಮೋದಿ ಎಂಬ ಘೋಷಣೆಗಳನ್ನು ಹಾಕುವ ಮೂಲಕ ಪ್ರಧಾನಿಯನ್ನು ವಿಶಿಷ್ಟವಾಗಿ ಕೇಸರಿ ಶಾಲುಗಳನ್ನು ತಿರುಗಿಸಿ ಸ್ವಾಗತಿಸಿದರು. ಮೂಲ್ಕಿ ಶ್ರೀ ವೆಂಕಟರಮಣ ಸ್ವಾಮಿ ಕೊ ನಮಸ್ಕಾರ್ ಎಂದು ಹೇಳಿ ತಮ್ಮ ಮಾತನ್ನು ಪ್ರಧಾನಿ ಮುಂದುವರಿಸಿದರು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ಇದಕ್ಕೆ ಸಂತರ ಪ್ರೇರಣೆ ಕಾರಣ. ಉಡುಪಿ ಮತ್ತು ದಕ್ಷಿಣ ಕನ್ನಡ ಶೈಕ್ಷಣಿಕ ಸಾಧನೆಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜೆಪಿಯ ಜನಪ್ರಿಯ ಯೋಜನೆಗಳನ್ನು ಸ್ಥಗಿತಗೊಳಿಸಲು ಕಾಂಗ್ರೆಸ್ ಸಂಚು ರೂಪಿಸಿದೆ. ಕರ್ನಾಟಕವನ್ನು ದೆಹಲಿಯಲ್ಲಿರುವ ಕುಟುಂಬದ ಎಟಿಎಂ ಮಾಡಲು ಕಾಂಗ್ರೆಸ್ ಯೋಜನೆ ಹಾಕಿಕೊಂಡಿದೆ. 85% ಕಮಿಷನ್ ಕಾಂಗ್ರೆಸ್ ಅಜೆಂಡಾವಾಗಿದೆ. ಶಾಂತಿ ಹಾಗೂ ವಿಕಾಸದ ಶತ್ರುವಾಗಿರುವ ಕಾಂಗ್ರೆಸ್ ಬಗ್ಗೆ ರಾಜ್ಯದ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಕರ್ನಾಟವನ್ನು ದಶಗಳ ಹಿಂದೆ ಕರೆದೊಯ್ಯಲು ಕಾಂಗ್ರೆಸ್ ಕಾತರದಿಂದ ಕಾಯುತ್ತಿದೆ ಎಂದರು.
ಫಸ್ಟ್ ಟೈಮ್ ವೋಟರ್ಸ್ ಗೆ ಮೋದಿ ಸಂದೇಶ: ಮೊದಲ ಬಾರಿ ಮತದಾನ ಮಾಡುತ್ತಿರುವ ನನ್ನ ಪ್ರೀತಿಯ ಮಕ್ಕಳೇ, ರಾಜ್ಯದ ಭವಿಷ್ಯ ನಿರ್ಧರಿಸುವಲ್ಲಿ ನಿಮ್ಮ ಪಾತ್ರ ಪ್ರಮುಖವಾಗಿದೆ. ಇದರಿಂದ ನಿಮ್ಮ ಭವಿಷ್ಯ ಕೂಡ ಉಜ್ವಲವಾಗಲಿದೆ. ಸ್ಥಿರ ಸರ್ಕಾರದಿಂದ ನಿಮ್ಮೆಲ್ಲಾ ಕನಸುಗಳನ್ನು ನನಸಾಗಲು ಸಾಧ್ಯವಾಗಲಿದೆ. ಸ್ಥಿರ ಸರ್ಕಾರ ಇಲ್ಲದಿದ್ದರೆ ನಿಮ್ಮ ಭವಿಷ್ಯ ಕೂಡ ಅಸ್ಥಿರವಾಗಲಿದೆ. ಸ್ಥಿರ ಸರ್ಕಾರ ರಚನೆಯಾಗಬೇಕು, ಇದಕ್ಕಾಗಿ ಬಿಜೆಪಿ ಬೆಂಬಲಿಸಿ ಎಂದು ಕರೆ ನೀಡಿದರು.
ಕನ್ನಡಕ್ಕೆ ಒತ್ತು: ಪ್ರತಿ ಬಾರಿ ಪ್ರಧಾನಿ ಮಾತನ್ನು ಆರಂಭಿಸುವಾಗ, “ಸಹೋದರ ಸಹೋದರಿಯರೇ, ಬಂಧು ಭಗಿನಿಯರೇ, ಸ್ನೇಹಿತರೇ, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ” ಎಂದು ಹೇಳಿದು ವಿಶೇಷವಾಗಿತ್ತು.