ಮಂಗಳೂರು: ಮಂಗಳೂರಿನ ಕದ್ರಿ ಪಾರ್ಕ್ ಆವರಣದಲ್ಲಿ ಸಿಒಡಿಪಿ (ರಿ) ಮಂಗಳೂರು, ತೋಟಗಾರಿಕೆ ಇಲಾಖೆ ಹಾಗೂ ಕಾಮಧೇನು ಮತ್ತು ಕಲ್ಪವೃಕ್ಷ ಮಹಾಸಂಘ ಇವರ ಜಂಟಿ ಆಶ್ರಯದಲ್ಲಿ ಇಂದು ನಡೆದ ಪರಿಸರ ಸಂರಕ್ಷಣಾ ಕಾರ್ಯಕ್ರಮದಲ್ಲಿ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆಯಿಂದ ರೂಪಿಸಲಾದ ಪರಿಸರ ಸ್ನೇಹಿ ಆಸನವನ್ನು ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ಉತ್ತರ ವಾರ್ಡಿನ ಕಾರ್ಪೋರೇಟರ್ ಶಕಿಲಾ ಕಾವ ಉದ್ಫಾಟಿಸಿದರು.
ನಂತರ ಮಾತನಾಡಿದ ಅವರು, ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಸಿಒಡಿಪಿ ಸಂಸ್ಥೆಯು ಇಂತಹ ಒಂದು ಒಳ್ಳೆಯ ಪ್ರಯೋಗವನ್ನು ಈ ಪಾರ್ಕಿನಲ್ಲಿ ಮಾಡಿರುವುದು ಶ್ಲಾಘನೀಯ. ಈ ಯೋಜನೆ ಇತರ ಕಡೆಗಳಲ್ಲಿ ಮಾದರಿಯಾಗಲಿ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ| ವಿನ್ಸೆಂಟ್ ಡಿ ಸೋಜರವರು ಯೋಜನೆಯ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕಿ ನಿರ್ದೇಶಕಿ ಜಾನಕಿ ಮಾತನಾಡಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ವಹಣೆ ಮಾಡಿ ಇದರ ಮರುಬಳಕೆಯಿಂದ ಇಂತಹ ಒಂದು ಸುಂದರ ಪರಿಸರ ಸ್ನೇಹಿ ಆಸನವನ್ನು ತಯಾರಿಸಿದ ಸಿಒಡಿಪಿ ಸಂಸ್ಥೆಗೆ ಧನ್ಯವಾದ ಸಲ್ಲಿಸಿದರು.
ನಿವೃತ್ತ ಪ್ರಾಶುಪಾಲರಾದ ಫಾ| ಪ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್, ಸಿಒಡಿಪಿ ಸಂಸ್ಥೆಯ ಸಂಯೋಜಕಿಯಾದ ರೀಟಾ ಹಾಗೂ ಕಾರ್ಯಕರ್ತೆಯಾದ ಕಲಾ ಗಿರೀಶ್ ಉಪಸ್ಥಿತರಿದ್ದರು. ಕಾಮಧೇನು ಮಹಾಸಂಘದ ಅಧ್ಯಕ್ಷರಾದ ಸತ್ಯವತಿ ಸ್ವಾಗತಿಸಿ, ಕಲ್ಪವೃಕ್ಷ ಮಹಾಸಂಘದ ಅಧ್ಯಕ್ಷೆ ಜಯಲಕ್ಷ್ಮೀ ವಂದಿಸಿದರು. ಸಿಒಡಿಪಿ ಸಂಸ್ಥೆಯ ಯೋಜನಾಧಿಕಾರಿ ಲೆನೆಟ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು.