ಕೋಟ: ಶಾಲೆಯ ಅಭಿವೃದ್ಧಿ ದೇವಸ್ಥಾನದ ಅಭಿವೃದ್ಧಿಯಷ್ಟೇ ಪುಣ್ಯದ ಕೆಲಸ. ನಾವು ವಿದ್ಯಾರ್ಜನೆಗೈದ ಶಾಲೆಗಳಿಗೆ ನಮ್ಮಿಂದಾದ ನೆರವು ನೀಡಿದಾಗ ಶಾಲೆ ಅಭಿವೃದ್ಧಿ ಜೊತೆಗೆ ಮಕ್ಕಳಿಗೂ ಕಲಿಕೆಗೆ ಸಹಕಾರವಾಗುತ್ತದೆ. ಊರಿನ ಸಂಘಟನೆಗಳು ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಬಗ್ಗೆ ಆಸಕ್ತಿ ವಹಿಸಬೇಕು, ಶಾಲೆಗಳ ಅಭಿವೃದ್ಧಿಯಲ್ಲಿ ಸಂಘಟನೆಯ ಪಾತ್ರ ಬಹುಮುಖ್ಯವಾಗಿದೆ ಎಂದು ಯುವವಾಹಿನಿ (ರಿ.)ಯಡ್ತಾಡಿ ಘಟಕದ ಅಧ್ಯಕ್ಷ ರಾಜು ಪೂಜಾರಿ ಹೇಳಿದರು.
ಅವರು ಯುವವಾಹಿನಿ(ರಿ.) ಯಡ್ತಾಡಿ ಘಟಕದ ವತಿಯಿಂದ ಯಡ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪೀಠೋಪಕರಣ ವಿತರಣೆ ಹಾಗೂ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಶಾಂತ ಪೈ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಂತ ಪೈ ಅವರು, ಹಳ್ಳಿ ಕಡೆ ವಿದ್ಯಾರ್ಥಿಗಳು ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಅವರಿಗೂ ಗುಣಮಟ್ಟದ ಶಿಕ್ಷಣ ನೀಡಿ ಪ್ರೋತ್ಸಾಹಿಸಿದಾಗ ಅವರು ಸಾಧನೆ
ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಯುವವಾಹಿನಿ(ರಿ.)ಯಡ್ತಾಡಿ ಘಟಕದ ಸದಸ್ಯರ ಸಹಕಾರದಿಂದ ಪೀಠೋಪಕರಣ ನೀಡಿರುವುದು ಶ್ಲಾಘನೀಯ. ಅವರು ಸನ್ಮಾನಿಸಿ ಗುರುತಿಸಿದಕ್ಕೆ ಅಭಾರಿಯಾಗಿದ್ದೇನೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರೇಮ, ಶಾಲಾ ಅಧ್ಯಾಪಕ ವೃಂದ, ಯುವವಾಹಿನಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯುವವಾಹಿನಿ ಕಾರ್ಯದರ್ಶಿ ಅಜಿತ್ ಕುಮಾರ್ ನಿರೂಪಿಸಿದರು.